ಮಂಗಳೂರಿನಲ್ಲಿ ಮೀನುಗಾರಿಕೆ ವಿವಿ ಸ್ಥಾಪನೆಗೆ ಸಿಎಂ ಜೊತೆ ಚರ್ಚೆ: ಸಚಿವ ಅಂಗಾರ

Update: 2021-09-16 18:09 GMT

ಬೆಂಗಳೂರು, ಸೆ.16: ಮಂಗಳೂರಿನಲ್ಲಿ ಮೀನುಗಾರಿಕೆ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಚರ್ಚೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ತಿಳಿಸಿದರು.

ಗುರುವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಡಿ.ವೇದವ್ಯಾಸ ಕಾಮತ್ ಗಮನ ಸೆಳೆದ ಸೂಚನೆಗೆ ಉತ್ತರಿಸಿದ ಅವರು, ಮಂಗಳೂರಿನಲ್ಲಿ ಮೀನುಗಾರಿಕೆ ವಿವಿ ಸ್ಥಾಪನೆ ಮಾಡುವುದರ ಜೊತೆಗೆ ಒಳನಾಡು ಮೀನುಗಾರಿಕೆಗೆ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಉತ್ತೇಜನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಡಿ.ವೇದವ್ಯಾಸ ಕಾಮತ್, ಮಂಗಳೂರಿನಲ್ಲಿ ಮೀನುಗಾರಿಕೆ ವಿವಿ ಸ್ಥಾಪನೆಯ ಅಗತ್ಯವಿದೆ. ದಕ್ಷಿಣ ಏಷ್ಯಾದಲ್ಲೆ ಮೊದಲ ಮೀನುಗಾರಿಕೆ ಕಾಲೇಜು ಸ್ಥಾಪನೆಯಾದದ್ದು ಮಂಗಳೂರಿನಲ್ಲಿ. ತಮಿಳುನಾಡು, ಕೇರಳ, ಆಂಧ್ರಪ್ರದೇಶದಲ್ಲಿ ಮೀನುಗಾರಿಕೆ ವಿಜ್ಞಾನಗಳ ಸಂಸ್ಥೆಗಳನ್ನು ಸ್ಥಾಪಿಸಿ ಸಾಕಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ಮಂಗಳೂರಿನಲ್ಲಿ ಮೀನುಗಾರಿಕೆಯಲ್ಲಿ ಸುಮಾರು 5 ಲಕ್ಷ ಮಂದಿ ತೊಡಗಿಸಿಕೊಂಡಿದ್ದಾರೆ. ಇಲ್ಲಿ ಮೀನುಗಾರಿಕೆ ವಿವಿಯ ಅಗತ್ಯವಿದೆ. ಸರಕಾರ ಇಲ್ಲಿ ನೂತನ ವಿವಿ ಸ್ಥಾಪನೆ ಮಾಡಿ ಪ್ರಾರಂಭಿಕ ಹಂತದಲ್ಲಿ 125 ಕೋಟಿ ರೂ.ಗಳನ್ನು ಅನುದಾನ ಒದಗಿಸಬೇಕು ಎಂದು ಅವರು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News