ನಾನು ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರ ಪಕ್ಷದ ಹಿರಿಯರು ನಿರ್ಧರಿಸಲಿದ್ದಾರೆ: ಬಿ.ವೈ. ವಿಜಯೇಂದ್ರ

Update: 2021-09-17 12:20 GMT
ಬಿ.ವೈ. ವಿಜಯೇಂದ್ರ

ಶಿವಮೊಗ್ಗ, ಸೆ.17: ನಾನು ಚುನಾವಣೆಗೆ ಸ್ಪರ್ಧಿಸಬೇಕೆ ಅಥವಾ ಬೇಡವೇ ಎಂಬುದನ್ನು ಪಕ್ಷದ ಹಿರಿಯರು ನಿರ್ಧರಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮೊದಲು ಪಕ್ಷದ ಕಾರ್ಯಕರ್ತನಾಗಿದ್ದೇನೆ. ಹಿರಿಯರು ನನ್ನನ್ನು ರಾಜ್ಯ ಉಪಾಧ್ಯಕ್ಷನಾಗಿ ಕೆಲಸ ಮಾಡಲು ಅವಲಕಾಶ ಕೊಟ್ಟಿದ್ದಾರೆ. ಚುನಾವಣೆಗೆ ಸ್ಪರ್ಧಿಸುವ ವಿಷಯ ಬಂದಾಗ ಅದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರು ಯಾರಿಗೆ ಯಾವ ಸಂದರ್ಭದಲ್ಲಿ ಅವಕಾಶ ಕೊಡಬೇಕು ಎಂಬುದನ್ನು ತೀರ್ಮಾನಿಸುತ್ತಾರೆ ಎಂದರು.

ನಾನು ಯಾವುದೇ ಹುದ್ದೆಯ ನಿರೀಕ್ಷೆಯನ್ನಿಟ್ಟುಕೊಂಡು ಕೆಲಸ ಮಾಡುತ್ತಿಲ್ಲ. ನಾನೊಬ್ಬ ಭಾರತೀಯ ಮತ್ತು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ನನ್ನ ಪಾಲಿನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ನಾಳೆ ಮತ್ತು ನಾಡಿದ್ದು ದಾವಣಗೆರೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯ ನಡೆಯಲಿದ್ದು, ರಾಜ್ಯದಲ್ಲಿ ಸಮಸ್ಯೆಗಳು ಮತ್ತು ಮುಖ್ಯವಾಗಿ ಮುಂಬರುವ ಚುನಾವಣೆಗಳನ್ನು ಎದುರಿಸುವ ಕುರಿತು ಚರ್ಚೆ ನಡೆಸಲಿದ್ದೇವೆ ಎಂದರು.

ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ ದೇವಾಲಯಗಳನ್ನು ತೆರವುಗೊಳಿಸಲಾಗುತ್ತಿದೆ. ಅಧಿಕಾರಿಗಳು ಸುಪ್ರೀಂ ಕೋರ್ಟ್ ತೀರ್ಪು ಇದ್ದರೂ ಕೂಡ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ವಿಶ್ವಾಸಕ್ಕೆ ತೆಗೆದುಕೊಂಡು ನಂತರ ಆದೇಶ ಕಾರ್ಯಗತಗೊಳಿಸಬೇಕು. ಈಗಾಗಲೇ ಮುಖ್ಯಮಂತ್ರಿಗಳು ದೇವಾಲಯಗಳನ್ನು ತೆರವುಗೊಳಿಸಲು ಸದ್ಯಕ್ಕೆ ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದು, ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News