ರಾಷ್ಟ್ರೀಯ ಪಕ್ಷಗಳು ಮುಸ್ಲಿಮರು ನೆಮ್ಮದಿಯಿಂದ ಬಾಳುವ ಪರಿಸ್ಥಿತಿ ನಿರ್ಮಿಸಬೇಕು: ಎಚ್.ಡಿ.ದೇವೇಗೌಡ

Update: 2021-09-17 12:57 GMT

ಬೆಂಗಳೂರು, ಸೆ.17: ದೇಶದಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಮುಸ್ಲಿಮರು ನೆಮ್ಮದಿಯಿಂದ ಬಾಳುವಂತಹ ಪರಿಸ್ಥಿತಿಯನ್ನು ನಿರ್ಮಿಸಬೇಕು. ಈ ವಿಚಾರವನ್ನು ನಾನು ಸಂಸತ್ತಿನ ಅಧಿವೇಶನದಲ್ಲೂ ಚರ್ಚಿಸಿದ್ದೇನೆ. ಯಾವುದೆ ಕಾರಣಕ್ಕೂ ಅಲ್ಪಸಂಖ್ಯಾತ ಸಮುದಾಯಕ್ಕೆ ಅನ್ಯಾಯವಾಗಬಾರದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

ಶುಕ್ರವಾರ ನಗರದ ಶೇಷಾದ್ರಿಪುರಂನಲ್ಲಿರುವ ಜೆಡಿಎಸ್ ಕಚೇರಿ(ಜೆ.ಪಿ.ಭವನ)ಯಲ್ಲಿ ಕಾಂಗ್ರೆಸ್ ತೊರೆದ 24 ಮಂದಿ ಮುಸ್ಲಿಮ್ ನಾಯಕರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಬಳಿಕ ಅವರು ಮಾತನಾಡಿದರು.

ಮುಸ್ಲಿಮ್ ಸಮುದಾಯದ 24 ಮಂದಿ ಮುಖಂಡರು ಇವತ್ತು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಮುಸ್ಲಿಮ್ ಸಮುದಾಯಕ್ಕೆ ಮೀಸಲಾತಿ ಸೌಲಭ್ಯವನ್ನು ಕೊಟ್ಟೆ. ಅಲ್ಲದೆ, ಇಬ್ಬರನ್ನು ಸಚಿವರನ್ನಾಗಿ ಮಾಡಿದ್ದೆ. ಸಿ.ಎಂ.ಇಬ್ರಾಹಿಮ್ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ದೆ ಎಂದು ಅವರು ತಿಳಿಸಿದರು.

ಬಿಬಿಎಂಪಿ ವಾರ್ಡುಗಳ ಮರು ವಿಂಗಡಣೆ ಮಾಡುವ ಮೂಲಕ ಮುಸ್ಲಿಮರು ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲದಂತೆ ಬಿಜೆಪಿ ತಂತ್ರಗಳನ್ನು ನಡೆಸಿದೆ ಎಂದು ಆರೋಪಿಸಿದ ಅವರು, ಸೆ.30ರಂದು ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷದ ದೊಡ್ಡ ಸಮಾವೇಶವನ್ನು ಆಯೋಜನೆ ಮಾಡಿ, ರಾಷ್ಟ್ರೀಯ ಪಕ್ಷಗಳಿಗೆ ತಕ್ಕ ಉತ್ತರ ನೀಡೋಣ ಎಂದರು.

ರಾಜ್ಯ ಬಿಜೆಪಿ ಸರಕಾರದ ಆಡಳಿತದ ಬಗ್ಗೆ ನಾನು ಈ ಚರ್ಚೆ ಮಾಡಲು ಹೋಗಲ್ಲ. ಭ್ರಷ್ಟಾಚಾರ ಯಾವ ರೀತಿ ನಡೆಯುತ್ತಿದೆ ಎಂಬುದು ನಮಗೆ ಗೊತ್ತಿದೆ. ಕೋವಿಡ್ ನೆಪ ಹೇಳಿಕೊಂಡು ಅಗತ್ಯ ವಸ್ತುಗಳು ಹಾಗೂ ಪೆಟ್ರೋಲ್, ಡಿಸೇಲ್ ಬೆಲೆಗಳನ್ನು ಏರಿಕೆ ಮಾಡುತ್ತಿರುವುದು ಯಾವುದೆ ಕಾರಣಕ್ಕೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ದೇವೇಗೌಡ ಹೇಳಿದರು.

ಬೆಲೆ ಏರಿಕೆ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸದನದಲ್ಲಿ ನಾಲ್ಕು ಗಂಟೆ ಚರ್ಚೆ ಮಾಡಿದ್ದಾರೆ. ಆದರೆ, ನಮ್ಮ ಹೋರಾಟ ತೋರ್ಪಡಿಕೆಗೆ ಅಲ್ಲ. ವಾಜಪೇಯಿ ಪ್ರಧಾನಿಯಾಗಿದ್ದಾಗ ಸೀಮೆಎಣ್ಣೆ ಬೆಲೆ ಒಂದು ರೂಪಾಯಿ ಏರಿಕೆ ಆಗಿತ್ತು. ಆಗ ಸೀಮೆಎಣ್ಣೆ ಡಬ್ಬ ತಲೆ ಮೇಲೆ ಇಟ್ಟುಕೊಂಡು ಹೋರಾಟ ಮಾಡಿದ್ದೆವು ಎಂದು ಅವರು ಸ್ಮರಿಸಿಕೊಂಡರು.

ತಮಿಳುನಾಡು ಸರಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‍ಗೆ ಮೂರು ರೂಪಾಯಿ ಕಡಿತ ಮಾಡಿದೆ. ಅದೇ ರೀತಿ ದೇಶದ ಇತರ ರಾಜ್ಯ ಸರಕಾರಗಳು ಬೆಲೆ ಇಳಿಸಲು ಮುಂದಾಗಬೇಕು. ಪೆಟ್ರೋಲ್, ಡಿಸೇಲ್ ಬೆಲೆಗಳು ಇಳಿಕೆಯಾದರೆ ಜನಸಾಮಾನ್ಯರು ಕೊಂಚ ನಿಟ್ಟುಸಿರು ಬಿಡಲು ಸಾಧ್ಯವಾಗುತ್ತದೆ ಎಂದು ದೇವೇಗೌಡ ಹೇಳಿದರು.'

ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಮೈತ್ರಿ ಮಾಡಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕೈಗೊಂಡ ನಿರ್ಧಾರವನ್ನು ಅವರ ಪಕ್ಷದ ಇತರ ಪ್ರಮುಖ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಸ್ವಾಗತಿಸಲಿಲ್ಲ. ಬಿಜೆಪಿ ಪಕ್ಷದ ವತಿಯಿಂದ ಆರ್.ಅಶೋಕ್ ಮಾತ್ರ ಬಂದು ಚರ್ಚೆ ಮಾಡಿದ್ದಾರೆ. ಸದ್ಯಕ್ಕೆ ನಾವು ಕಲಬುರಗಿ ವಿಚಾರದಲ್ಲಿ ಯಾವುದೆ ತೀರ್ಮಾನ ಕೈಗೊಂಡಿಲ್ಲ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News