ಹಿಂದೂ-ಮುಸ್ಲಿಂ ಕೈದಿಗಳಿಗೆ ಪ್ರತ್ಯೇಕ ಸೆಲ್ ವ್ಯವಸ್ಥೆ ಬೇಡ: ಯು.ಟಿ.ಖಾದರ್

Update: 2021-09-17 13:24 GMT

ಬೆಂಗಳೂರು, ಸೆ. 17: `ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಹಿಂದೂ ಮತ್ತು ಮುಸ್ಲಿಂ ಕೈದಿಗಳನ್ನು ಪ್ರತ್ಯೇಕ ಸೆಲ್‍ಗಳಲ್ಲಿ ಇರಿಸಿದ್ದು, ಅವರು ಜೈಲಿನಿಂದ ಬಿಡುಗಡೆಯಾಗಿ ಬಂದು ಸಮಾಜದಲ್ಲಿಯೂ ಅದೇ ಮನೋಭಾವ ಬೆಳೆಸುತ್ತಿದ್ದಾರೆ. ಹೀಗಾಗಿ ಎರಡೂ ಸಮುದಾಯದವರನ್ನು ಒಂದೇ ಸೆಲ್‍ನಲ್ಲಿ ಹಾಕಿ' ಎಂದು ಕಾಂಗ್ರೆಸ್ ಸದಸ್ಯ ಯು.ಟಿ.ಖಾದರ್ ಸಲಹೆ ಮಾಡಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ಬಂದಿಗಳ ಗುರುತಿಸುವಿಕೆ(ಕರ್ನಾಟಕ ತಿದ್ದುಪಡಿ) ವಿಧೇಯಕದ ಮೇಲೆ ಮಾತನಾಡಿದ ಅವರು, `ಕೈದಿಗಳನ್ನು ಒಂದೇ ಸೆಲ್‍ನಲ್ಲಿ ಇರಿಸಬೇಕು. ಆದರೆ, ಮಂಗಳೂರಿನ ಕಾರಾಗೃಹದಲ್ಲಿ ಹಿಂದೂ ಮತ್ತು ಮುಸ್ಲಿಮ್ ಕೈದಿಗಳನ್ನು ಬೇರೆ ಬೇರೆ ಸೆಲ್‍ಗಳಿಗೆ ಹಾಕಿರುವುದು ಏಕೆ?' ಎಂದು ಪ್ರಶ್ನಿಸಿದರು.

`ಮಂಗಳೂರಲ್ಲಿ ಈ ರೀತಿಯ ಸಮಸ್ಯೆಯಾಗಿದೆ. ಜೈಲಿನಲ್ಲಿ ನೀವು ಈ ರೀತಿ ಮಾಡಿದರೆ, ಅವರು ಜೈಲಿನಿಂದ ಹೊರಗೆ ಬಂದು ಏನ್ ಮಾಡ್ತಾರೆ? ಅದೇ ಮನಸ್ಥಿತಿ ಇಟ್ಟುಕೊಂಡು ಬಂದು ಹೊರಗೂ ಅದೇ ಕೆಲಸ ಮಾಡುತ್ತಾರೆ' ಎಂದು ಖಾದರ್ ಗಮನ ಸೆಳೆದರು.

`ಕೈದಿಗಳು ಕಾರಾಗೃಹಕ್ಕೆ ಮತ್ತೊಮ್ಮೆ ಹೋಗದಂತೆ ಎಚ್ಚರಿಕೆ ಬರುವ ರೀತಿಯಲ್ಲಿ ವ್ಯವಸ್ಥೆ ಆಗಬೇಕು. ಆದರೆ, ಅದರ ಬದಲಿಗೆ ಜೈಲಿನಲ್ಲಿರುವ ವ್ಯವಸ್ಥೆಗಳಿಂದಾಗಿ ಅಪರಾಧಿಗಳು ಜೈಲುಗಳತ್ತ ಆಕರ್ಷಿತರಾಗುತ್ತಿದ್ದಾರೆ. ಮನಃ ಪರಿವರ್ತನೆ ಬದಲಿಗೆ ಕ್ರಿಮಿನಲ್ ಕೃತ್ಯಗಳಿಗೆ ಪ್ರೋತ್ಸಾಹಿಸುವ ವ್ಯವಸ್ಥೆ ಸರಿಯಲ್ಲ' ಎಂದು ಖಾದರ್ ಆಕ್ಷೇಪಿಸಿದರು.

`ಮಂಗಳೂರು ಕಾರಾಗೃಹದಲ್ಲಿ ಮೊಬೈಲ್ ಸಂಪರ್ಕಕ್ಕೆ ಸಿಗಬಾರದು ಎಂದು ಜಾಮರ್ ಹಾಕಲಾಗಿದೆ. ಜೈಲಿನಲ್ಲಿ ಮೊಬೈಲ್ ಸಂಪರ್ಕ ಸುಲಭವಾಗಿ ಸಿಗುತ್ತದೆ. ಆದರೆ, ಆ ವ್ಯಾಪ್ತಿಯ ಹೊರಗೆ ಮೊಬೈಲ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾದರೆ ಏನು ಪ್ರಯೋಜನ' ಎಂದು ಖಾದರ್ ಪ್ರಶ್ನಿಸಿದರು.

ಜೆಡಿಎಸ್ ಸದಸ್ಯ ಅನ್ನದಾನಿ ಮಾತನಾಡಿ, `ಜೈಲಿನಲ್ಲಿ ಇದ್ದ ಕೈದಿಯೊಬ್ಬ ನನಗೆ ಫೋನ್ ಕರೆ ಮಾಡಿ ಸ್ವಲ್ಪ ದುಡ್ಡು ಕಳುಹಿಸಿ ಅಣ್ಣ ಎಂದಿದ್ದ. ಯಾವುದೋ ಸಣ್ಣ ಕೇಸ್‍ನಲ್ಲಿ ಜೈಲಿಗೆ ಹೋಗಿದ್ದ. ನನಗೆ ಅಚ್ಚರಿಯಾಯಿತು. ಜೈಲುಗಳಲ್ಲಿ ಮದ್ಯ, ಮಾದಕ ವಸ್ತುಗಳ ಸಹಿತ ಎಲ್ಲವೂ ಸಿಗುತ್ತದೆ' ಎಂದರು.

ಕೈದಿಗಳು ಜೈಲಿನಲ್ಲೇ ಕೂತು ಪ್ಲಾನ್ ಮಾಡಿ ಹಲ್ಲೆ, ಕೊಲೆ ಮಾಡಿಸುತ್ತಾರೆ. ಅಧಿಕಾರಿಗಳು ಇದಕ್ಕೆ ನೆರವು ನೀಡುತ್ತಿದ್ದಾರೆ. ಇಲ್ಲದೆ ಇದ್ದರೆ ಇವೆಲ್ಲ ನಡೆಯಲು ಸಾಧ್ಯವಿಲ್ಲ. ಜೈಲಿಂದಲೇ ಅಪರಾಧಗಳು, ಕುಮ್ಮಕ್ಕು, ಡೀಲ್‍ಗಳು ನಡೆಯುತ್ತವೆ, ಇದಕ್ಕೆ ಮೊದಲು ಕಡಿವಾಣ ಹಾಕಬೇಕು ಎಂದು ಅನ್ನದಾನಿ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News