ಅ.2ರಂದು ವಿಜಯನಗರ ಜಿಲ್ಲೆಗೆ ಮುಖ್ಯಮಂತ್ರಿ ಚಾಲನೆ: ಸಚಿವ ಆನಂದ್ ಸಿಂಗ್

Update: 2021-09-17 13:25 GMT
ಸಚಿವ ಆನಂದ್ ಸಿಂಗ್

ಹೊಸಪೇಟೆ(ವಿಜಯನಗರ), ಸೆ.17: ವಿಜಯನಗರ ಜಿಲ್ಲೆ ಅಧಿಕೃತವಾಗಿ ಅ.2ರಂದು ಉದ್ಘಾಟನೆಯಾಗಲಿದೆ. ಅ.2 ಮತ್ತು 3ರಂದು ಎರಡು ದಿನಗಳ ಕಾಲ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದು, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಅನೇಕ ಸಚಿವರು ಉಪಸ್ಥಿತರಿರಲಿದ್ದಾರೆ ಎಂದು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‍ಸಿಂಗ್ ಹೇಳಿದರು.

ಕಲ್ಯಾಣ ಕರ್ನಾಟಕ ಉತ್ಸವದ ನಿಮಿತ್ತ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ವಿಜೃಂಭಣೆ ಮತ್ತು ಸರಳ ಎರಡನ್ನು ಗಮನದಲ್ಲಿಟ್ಟುಕೊಂಡು ವೈಭವದ ವಿಜಯನಗರ ಜಿಲ್ಲೆಗೆ ಚಾಲನೆ ನೀಡಲಾಗುತ್ತದೆ. ಇದಕ್ಕಾಗಿ ಬೃಹತ್ ವೇದಿಕೆ ಸಿದ್ಧಪಡಿಸಲಾಗುತ್ತಿದ್ದು, ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲ ಅಗತ್ಯ ಸಿದ್ಧತಾ ಕಾರ್ಯಗಳು ನಾಳೆಯಿಂದ ನಗರದಲ್ಲಿ ನಡೆಯಲಿವೆ. ಇದಕ್ಕಾಗಿ ತಂಡಗಳು ಬರಲಿವೆ ಎಂದು ಆನಂದ್ ಸಿಂಗ್ ವಿವರಿಸಿದರು.

ಮುಖ್ಯಮಂತ್ರಿಗಳು ವಿಜಯನಗರ ಜಿಲ್ಲೆಗೆ ಚಾಲನೆ ನೀಡುವುದರ ಜೊತೆಗೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಇದೇ ಸಂದರ್ಭದಲ್ಲಿ ಚಾಲನೆ ನೀಡಲಿದ್ದಾರೆ. ಜಿಲ್ಲೆ ಕಾರ್ಯಾರಂಭ ಮಾಡುವ ಸಂದರ್ಭದಲ್ಲಿ ಅನೇಕ ಸವಾಲುಗಳಿರುತ್ತವೆ. ಕಚೇರಿಗಳ ಕಾರ್ಯಾರಂಭ ಮಾಡುವುದು, ಯುವ ಮತ್ತು ಉತ್ಸಾಹಿ ಹಾಗೂ ಅನುಭವಿ ಅಧಿಕಾರಿಗಳನ್ನು ಕರೆತರುವುದು ಎಂದು ಅವರು ಹೇಳಿದರು.

ಅಲ್ಲದೆ, ಈ ಭಾಗದ ಜನರು ವಿವಿಧ ಸರಕಾರಿ ಸೌಲಭ್ಯಗಳಿಗೆ ಬಳ್ಳಾರಿಗೆ ಅಲೆದಾಡುವುದನ್ನು ತಪ್ಪಿಸಿ, ಎಲ್ಲ ಸೌಲಭ್ಯಗಳನ್ನು ವಿಜಯನಗರದಲ್ಲಿ ಸಿಗುವಂತೆ ನೋಡಿಕೊಳ್ಳುವುದು. ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳು ಆರಂಭ ಮಾಡುವ ಸಂದರ್ಭದಲ್ಲಾದ ಲೋಪಗಳನ್ನು ಗಮನದಲ್ಲಿಟ್ಟುಕೊಂಡು ಈ ಜಿಲ್ಲೆಯಲ್ಲಿ ಆ ರೀತಿಯ ಸಮಸ್ಯೆಗಳಾಗದಂತೆ ಜಿಲ್ಲೆಯನ್ನು ಕಟ್ಟಲಾಗುವುದು ಮತ್ತು ಮಾದರಿ ಜಿಲ್ಲೆಯನ್ನಾಗಿ ರೂಪಿಸಲಾಗುವುದು ಎಂದು ಆನಂದ್ ಸಿಂಗ್ ತಿಳಿಸಿದರು.

ಟಿಎಸ್ಪಿ ಕಚೇರಿ ಆವರಣದಲ್ಲಿ ಸ್ಥಾಪಿಸಲಾಗುತ್ತಿರುವ ಜಿಲ್ಲಾಡಳಿತದ ಕಟ್ಟಡ 6 ಕೋಟಿ ರೂ.ವೆಚ್ಚದಲ್ಲಿ ನವೀಕರಣಗೊಳ್ಳುತ್ತಿದ್ದು, ಈಗಾಗಲೇ 3 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಕಾರಿಗನೂರ ಬಳಿಯ ಇಎಸ್‍ಐ ಕಟ್ಟಡದಲ್ಲಿ ಟಿಎಸ್ಪಿ ಕಚೇರಿ ಸ್ಥಾಪಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಟಿಎಸ್ಪಿ ಕಚೇರಿ ಆವರಣದಲ್ಲಿಯೇ 35 ಎಕರೆ ವಿಶಾಲ ಜಾಗದಲ್ಲಿ ಮೆಡಿಸಿಟಿ ಸ್ಥಾಪಿಸಲಾಗುತ್ತಿದೆ. ಇದರಲ್ಲಿ 110 ಕೋಟಿ ರೂ.ವೆಚ್ಚದ 250 ಹಾಸಿಗೆ ಆಸ್ಪತ್ರೆ, ಮೆಡಿಕಲ್ ಕಾಲೇಜು, ನಸಿರ್ಂಗ್ ಕಾಲೇಜುಗಳಿರಲಿವೆ ಎಂದು ಆನಂದ್ ಸಿಂಗ್ ತಿಳಿಸಿದರು.

ಎಲ್ಲರ ಸಮ್ಮತಿ ಇದ್ದರೇ ಮಹಾನಗರ ಪಾಲಿಕೆ: ಜನರಿಗಾಗಿಯೆ ಹೊಸಪೇಟೆ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ. ಹೊಸಪೇಟೆ ನಗರಸಭೆ ಮಹಾನಗರ ಪಾಲಿಕೆಯಾಗಿ ಪರಿವರ್ತನೆಯಾದರೇ ಅಭಿವೃದ್ಧಿಗೆ ಅನುದಾನ ಬರುತ್ತದೆ. ಸಾಕಷ್ಟು ಪ್ರಮಾಣದ ಅಭಿವೃದ್ಧಿಯಾಗುತ್ತದೆ ಎಂಬ ಉದ್ದೇಶದಿಂದ ಕರಡು ಸಿದ್ಧಪಡಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಕಮಲಾಪುರ ಪಟ್ಟಣ ಪಂಚಾಯಿತಿ, ನಾಗೇನಹಳ್ಳಿ ಗ್ರಾ.ಪಂ.ಗಳು ಈ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿಸದಂತೆ ಗೊತ್ತುವಳಿ ಅಂಗೀಕರಿಸಿರುವುದಕ್ಕೆ ಉತ್ತರಿಸಿದ ಆನಂದ್ ಸಿಂಗ್, ಎಲ್ಲರೊಂದಿಗೆ ಚರ್ಚಿಸಿ ಸಮ್ಮತಿ ಪಡೆದುಕೊಳ್ಳಲಾಗುವುದು. ಆದರೂ ಜನರು ಸದ್ಯ ಈಗ ಬೇಡ, ಮುಂದೆ ನೋಡಿದರಾಯ್ತು ಅಂತ ಅಂದರೆ ಪಾಲಿಕೆಯನ್ನಾಗಿ ಮಾಡುವ ಪ್ರಸ್ತಾಪ ಕೈಬಿಡಲಾಗುವುದು ಎಂದರು.

ಹಂಪಿ ಉತ್ಸವವನ್ನು ಒಂದು ದಿನ ಸಾಂಕೇತಿಕವಾಗಿ ಆಚರಿಸಲಾಗುವುದು ಎಂದು ಆನಂದ್ ಸಿಂಗ್ ಹೇಳಿದರು. ಈ ಸಂದರ್ಭದಲ್ಲಿ ಹುಡಾ ಅಧ್ಯಕ್ಷ ಅಶೋಕ ಜೀರೆ, ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಆಯುಕ್ತ ಅನಿರುದ್ಧ ಶ್ರವಣ್, ಅಪರ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ, ಸಹಾಯಕ ಆಯುಕ್ತ ಸಿದ್ಧರಾಮೇಶ್ವರ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News