ಹಿಂದೂಗಳ ಮೇಲೆ ಟಿಪ್ಪು ಜಯಂತಿ ವೇಳೆ ಇಲ್ಲದ ಪ್ರೀತಿ ಈಗ ಬಂದು ಬಿಟ್ಟಿದೆ: ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ತಿರುಗೇಟು

Update: 2021-09-17 14:03 GMT

ಮೈಸೂರು,ಸೆ.17: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಟಿಪ್ಪು ಜಯಂತಿ ಆಚರಣೆ ಮಾಡಬೇಕಾದರೆ, ಪ್ರತ್ಯೇಕ ಲಿಂಗಾಯತ ಧರ್ಮ ಮಾಡಬೇಕಾದರೆ  ಇಲ್ಲದ ಹಿಂದೂಗಳ ಮೇಲಿನ ಪ್ರೀತಿ  ದೇವಾಲಯ ನೆಲಸಮಗೊಳಿಸಿದಾಗ ಬಂದು ಬಿಟ್ಟಿದೆ ಎಂದು  ಸಂಸ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು 'ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ  ಟಿಪ್ಪು ಜಯಂತಿ ಆಚರಣೆ ಮಾಡಿದರು, ಆಗ ಹಿಂದೂಗಳ ಭಾವನೆಗೆ ಧಕ್ಕೆ ಉಂಟಾಗುತ್ತದೆ ಎಂಬುದು ಅರ್ಥವಾಗಲಿಲ್ಲವೇ' ? ಎಂದು ಪ್ರಶ್ನಿಸಿದರು. 

'ವೀರಶೈವ- ಲಿಂಗಾಯತ ಪ್ರತ್ಯೇಕ ಧರ್ಮ ಮಾಡಲು ಹೊರಟಾಗಲೂ ಹಿಂದೂಗಳ ಬಗ್ಗೆ ಅರಿವಾಗಲಿಲ್ಲ, ಇದೀಗ ದೇವಲಾಯ ನೆಲಸಮಗೊಳಿಸಿದ ಮೇಲೆ ಹಿಂದೂಗಳ ಮೇಲೆ ಪ್ರೀತಿ ಹೆಚ್ಚಾಗಿದೆ' ಎಂದು ಕಿಡಿಕಾರಿದ್ದಾರೆ.

'ದೇವಸ್ಥಾನ ಉಳಿಸಿಕೊಳ್ಳಲು ಮಾಡಬೇಕಾದ ಕೆಲಸವನ್ನು ಮಾಡುವಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ವಿಫಲವಾಗಿವೆ. 2009 ರ ಆದೇಶವನ್ನು ಪ್ರಶ್ನಿಸಿ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ಅಂದಿನ ಬಿಜೆಪಿ ಸರ್ಕಾರವೂ ವಿಫಲವಾಗಿದೆ. ಮುಂದೆ ಆಡಳಿತಕ್ಕೆ ಬಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೂ ವಿಫಲಗೊಂಡಿದೆ' ಎಂದು ಹರಿಹಾಯ್ದರು.

'ದೇವಸ್ಥಾನ ಹೊಡೆಯಲು ಬಿಜೆಪಿ ಕಾರಣ ಎನ್ನುತ್ತಿರುವ  ಸಿದ್ದರಾಮಯ್ಯ ಅವರು,  ಅವರೇ ಮುಖ್ಯಮಂತ್ರಿಗಳಾಗಿದ್ದಾಗ ಏಕೆ ನ್ಯಾಯಾಲಯದ ಆದೇಶ ಪರಿಶೀಲಿಸಲಿಲ್ಲ'? ಎಂದು ಪ್ರಶ್ನಿಸಿದರು. 

'ಸ್ವತಹ ವಕೀಲರಾಗಿರುವ ನಿಮಗೆ ಹಿಂದೂಗಳ ಭಾವನೆಗಿಂತ ಟಿಪ್ಪು ಜಯಂತಿ ಆಚರಣೆ ಮುಖ್ಯವಾಗಿತ್ತು, ಮತಪಡೆಯುವ ಸಲುವಾಗಿ ಲಿಂಗಾಯತ ಧರ್ಮ ಪ್ರತ್ಯೇಕ ವಿಚಾರಗಳನ್ನು ಮುಂದಿಟ್ಟು ರಾಜಕೀಯ ಮಾಡಿದಿರಿ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂಜನಗೂಡು ತಾಲೂಕಿನ ಹುಚ್ಚಗಣಿ ಮಹದೇವಮ್ಮ ದೇವಸ್ಥಾನ ನೆಲಸಮಗೊಳಿಸಿರುವುದಕ್ಕೆ ಜಿಲ್ಲಾಧಿಕಾರಿಗಳನ್ನು ಕಾರಣ ಕೇಳಲಾಗಿದೆ. ಅವರು ಉತ್ತರ ಕೊಟ್ಟ ನಂತರ ಮುಂದಿನ ತೀರ್ಮಾನ ಮಾಡಲಾಗುವುದು, ಒಟ್ಟಿನಲ್ಲಿ ನ್ಯಾಯಾಲಯದ ಆದೇಶವನ್ನು ಅಧಿಕಾರಿಗಳು ಸರಿಯಾಗಿ ಪಾಲಿಸಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News