ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣ: ತನಿಖೆಯ ಅಂತಿಮ ವರದಿ ಸಲ್ಲಿಸದಂತೆ ಹೈಕೋರ್ಟ್ ಸೂಚನೆ

Update: 2021-09-17 15:58 GMT

ಬೆಂಗಳೂರು, ಸೆ.17: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣದಲ್ಲಿ ತನಿಖೆಯ ಅಂತಿಮ ವರದಿ ಸಲ್ಲಿಸದಂತೆ ಸೂಚನೆ ನೀಡಿ, ಮಧ್ಯಂತರ ಆದೇಶವನ್ನು ಹೈಕೋರ್ಟ್ ಮುಂದೂಡಿತು.    

ಜಾರಕಿಹೊಳಿ ಸೀಡಿ ಪ್ರಕರಣದ ತನಿಖೆಗೆ ಎಸ್‍ಐಟಿ ರಚನೆ ಪ್ರಶ್ನಿಸಿ ಸಂತ್ರಸ್ತ ಯುವತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಅಂತಿಮ ವರದಿ ಸಲ್ಲಿಸದಂತೆ ಸೂಚನೆ ನೀಡಿತು. 

ಸರಕಾರದ ಪರ ವಾದಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು, ಪ್ರಕರಣದಲ್ಲಿ ಕಾನೂನು ಪ್ರಕಾರ ತನಿಖೆ ಮುಕ್ತಾಯವಾಗಿದೆ. ಸಿಆರ್‍ಪಿಸಿ ಪ್ರಕಾರ ಅಂತಿಮ ವರದಿ ಸಲ್ಲಿಸಲು ಅವಕಾಶ ನೀಡಿ ಎಂದು ಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ಯುವತಿ ಪರ ವಕೀಲೆ ಇಂದಿರಾ ಜೈಸಿಂಗ್ ಆಕ್ಷೇಪ ವ್ಯಕ್ತಪಡಿಸಿ, ಹೈಕೋರ್ಟ್ ಎಸ್‍ಐಟಿ ರಚನೆಗೆ ಸೂಚಿಸಿಲ್ಲ. ಯುವತಿ ಎಸ್‍ಐಟಿ ರಚನೆಯನ್ನು ಪ್ರಶ್ನಿಸಿದ್ದಾಳೆ. ಹೀಗಿರುವಾಗ ತರಾತುರಿಯಲ್ಲಿ ಅಂತಿಮ ವರದಿ ಸಲ್ಲಿಕೆ ಅವಶ್ಯಕತೆ ಏನು? ಪ್ರಕರಣದ ತನಿಖೆ ನ್ಯಾಯಾಂಗದ ಮೇಲ್ವಿಚಾರಣೆಯಲ್ಲಿ ನಡೆಯಬೇಕು. ಎಸ್‍ಐಟಿಯ ಮೇಲೆ ನಮಗೆ ನಂಬಿಕೆ ಇಲ್ಲ ಎಂದು ಪೀಠಕ್ಕೆ ತಿಳಿಸಿದರು.

ಎಸ್‍ಐಟಿ ತನಿಖಾ ವರದಿ ಈಗಾಗಲೇ ಸೋರಿಕೆಯಾಗಿದೆ. ಅದರಲ್ಲಿ ರಮೇಶ್ ಜಾರಕಿಹೊಳಿಗೆ ಕ್ಲೀನ್ ಚಿಟ್ ನೀಡಿದಂತಿದೆ. ತನಿಖಾ ವರದಿ ಸೋರಿಕೆ ಬಗ್ಗೆಯೂ ತನಿಖೆಯಾಗಬೇಕು. ಎಸ್‍ಐಟಿ ತನಿಖೆ ರದ್ದುಪಡಿಸಲು ನಾವು ಮನವಿ ಮಾಡಿದ್ದೇವೆ ಎಂದು ಜೈಸಿಂಗ್ ತಿಳಿಸಿದರು.
ವಕೀಲರ ವಾದ ಆಲಿಸಿದ ನ್ಯಾಯಪೀಠವು ಪ್ರಕರಣದಲ್ಲಿ ಅಂತಿಮ ವರದಿ ಸಲ್ಲಿಸದಂತೆ ಸೂಚನೆ ನೀಡಿ, ಮಧ್ಯಂತರ ಆದೇಶವನ್ನು ಮುಂದುವರಿಸಿತು. ವಿಚಾರಣೆಯನ್ನು ಸೆ.27ಕ್ಕೆ ಮೂಂದೂಡಿತು. ರಮೇಶ್ ಜಾರಕಿಹೊಳಿ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಹಾಜರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News