ಅರ್ಹರಿಗೆ ನಿವೇಶನ ಮರುಹಂಚಿಕೆಗೆ ಕ್ರಮ: ಸಚಿವ ಎಂಟಿಬಿ ನಾಗರಾಜ್

Update: 2021-09-17 16:45 GMT

ಬೆಂಗಳೂರು, ಸೆ. 17: ಸಣ್ಣ ಕೈಗಾರಿಕೆಗಳ ಸ್ಥಾಪನೆಗಾಗಿ ಸರಕಾರದಿಂದ ನೀಡಿರುವ ನಿವೇಶನವು ಒಂದೇ ಕುಟುಂಬದವರು ಪಡೆದಿದ್ದರೆ ಪರಿಶೀಲನೆ ನಡೆಸಿ ಅವುಗಳನ್ನು ರದ್ದುಪಡಿಸಿ ಅರ್ಹರಿಗೆ ಮರು ಹಂಚಿಕೆ ಮಾಡಲು ಕ್ರಮ ವಹಿಸಲಾಗುವುದು ಎಂದು ಸಣ್ಣ ಕೈಗಾರಿಕೆಗಳ ಸಚಿವ ಎಂ.ಟಿ.ಬಿ.ನಾಗರಾಜ್ ಭರವಸೆ ನೀಡಿದ್ದಾರೆ.

ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ರಾಜಾ ವೆಂಕಟಪ್ಪ ನಾಯಕ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಒಂದೇ ಕುಟುಂಬಕ್ಕೆ ನಾಲ್ಕೈದು ನಿವೇಶನ ಹಂಚಿಕೆಯಾಗಿದ್ದರೆ ಮತ್ತು ನಿವೇಶನ ನೀಡಿದರೂ ಕೈಗಾರಿಕೆಗಳನ್ನು ಆರಂಭಿಸದಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮುಂದಿನ ಕ್ರಮ ವಹಿಸಲಾಗುವುದು ಎಂದರು.

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಲು ಕೈಗಾರಿಕೆ ನೀತಿ 2020-25 ಅನ್ನು ಜಾರಿಗೊಳಿಸಲಾಗಿದೆ. ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕ ರಿಯಾಯಿತಿ, ಬಂಡವಾಳ ಹೂಡಿಕೆ ಸಹಾಯಧನ ಸೇರಿದಂತೆ ಹಲವು ರಿಯಾಯಿತಿಗಳನ್ನು ನೀಡಲಾಗಿದೆ ಎಂದರು.
ಕೇಂದ್ರ ಸರಕಾರದ ಪಿಎಂ ಉದ್ಯೋಗ ಸೃಜನ ಯೋಜನೆಯಡಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಗರಿಷ್ಟ ಸಾಲ 25 ಲಕ್ಷ ರೂ. ವರೆಗೆ ಬ್ಯಾಂಕ್‍ಗಳ ಮೂಲಕ ಸಾಲ ಸೌಲಭ್ಯ ಒದಗಿಸಿ ಸಣ್ಣ ಉದ್ಯಮಗಳನ್ನು ಸ್ಥಾಪಿಸಿ ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲ ಒದಗಿಸಲಾಗುವುದು ಎಂದರು.

ಎಸ್ಸಿ-ಎಸ್ಟಿ ಉದ್ಯಮಶೀಲರಿಗೆ ವಿಶೇಷ ಘಟಕ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಶೇ.75ರಷ್ಟು ರಿಯಾಯಿತಿ ದರದಲ್ಲಿ ಕೈಗಾರಿಕಾ ನಿವೇಶನಗಳನ್ನು ಮತ್ತು ಕೈಗಾರಿಕಾ ಶೆಡ್‍ಗಳನ್ನು ನೀಡಲಾಗುತ್ತಿದೆ. ಪರಿಶಿಷ್ಟರಿಗೆ ಉದ್ಯಮಶೀಲರಿಗೆ ವಿಶೇಷ ಘಟಕ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕ್‍ನಿಂದ ಸಾಲ ಒದಗಿಸಿ ಯೋಜನಾ ವೆಚ್ಚದ ಮೇಲೆ ಶೇ.60ರಷ್ಟು ಗರಿಷ್ಠ ಐದು ಲಕ್ಷ ರೂ. ಸಹಾಯಧನ ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News