5 ಸಾವಿರ ರೂ.ಗೆ ಮಗು ಮಾರಾಟ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ; ಕಾನೂನು ಸಚಿವ ಮಾಧುಸ್ವಾಮಿ

Update: 2021-09-17 17:32 GMT

ಬೆಂಗಳೂರು, ಸೆ. 17: ವಿಜಯಪುರ ಸರಕಾರಿ ಆಸ್ಪತ್ರೆಯಲ್ಲಿ ದಾದಿಯೊಬ್ಬರ ಮೂಲಕ ಮಹಿಳೆಯ 5 ಸಾವಿರ ರೂ.ಗಳಿಗೆ ಮಗುವನ್ನು ಮಾರಾಟ ಪ್ರಕರಣ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. `ಮಗು ಮಾರಾಟ ಮಾಡಿರುವುದು ಸತ್ಯ. ಈ ಪ್ರಕರಣವನ್ನು ಸರಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣವನ್ನು ದಾಖಲಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಎಂ.ಬಿ.ಪಾಟೀಲ್ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಮಾಧುಸ್ವಾಮಿ, ಮಗು ಮಾರಾಟ ಮಾಡಿರುವ ದಾದಿ ಹಾಗೂ ಮಹಿಳೆ ಭಾಗಿಯಾಗಿರುವ ಬಗ್ಗೆ ಮಾಹಿತಿ ಇದೆ. ಮಹಿಳೆಯ ಮನೆಯವರೂ ಇದಕ್ಕೆ ಆಕ್ಷೇಪಿಸಿ ಗಲಾಟೆ ಮಾಡಿದ್ದಾರೆ. ಇದು ಅತ್ಯಂತ ಹೇಯ ಕೃತ್ಯ ಎಂದು ವಿಷಾದಿಸಿದರು.

ಬಡವರ ಮಕ್ಕಳನ್ನು ನಾಲ್ಕೈದು ಸಾವಿರ ರೂಪಾಯಿಗೆ ಅನಾಮಧೇಯರು ತೆಗೆದುಕೊಂಡು ಹೋಗುತ್ತಾರೆ ಎಂದು ಗೊತ್ತಾಗಿದೆ. ಆದರೆ, ಈ ಪ್ರಕರಣದಲ್ಲಿ ದಾದಿ ಹಾಗೂ ಮಹಿಳೆ ಶಾಮೀಲಾಗಿದ್ದಾರೆಂದು ತಿಳಿದು ಬಂದಿದೆ. ಶೀಘ್ರವೇ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಾಧುಸ್ವಾಮಿ ಸದನಕ್ಕೆ ಭರವಸೆ ನೀಡಿದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಎಂ.ಬಿ.ಪಾಟೀಲ್, ವಿಜಯಪುರದಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಮಗು ಮಾರಾಟ ಆಗಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಎಸ್ಪಿ ದೃಢಪಡಿಸಿದ್ದಾರೆ. ಸರಕಾರಿ ಆಸ್ಪತ್ರೆ ದಾದಿಯೂ ಈ ಕೃತ್ಯದಲ್ಲಿ ಭಾಗಿಯಾಗಿದ್ದು ಅತ್ಯಂತ ಹೇಯ ಕೃತ್ಯ ಎಂದು ಗಮನ ಸೆಳೆದರು.

ನಾವು ಯಾವ ಕಾಲದಲ್ಲಿದ್ದೇವೆ: ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್‍ನ ಯಶವಂತರಾಯಗೌಡ ಪಾಟೀಲ್, ನಾವು ಇನ್ನೂ ಶಿಲಾಯುಗದಲ್ಲಿರುವ ಭಾವನೆ ಬರುತ್ತದೆ. ಬೇರೆ ಜಿಲ್ಲೆಗಳಲ್ಲಿ ಮಗು ಮಾರಾಟದ ಸುದ್ದಿ ಕೇಳುತ್ತಿದ್ದೇವೆ. ಆದರೆ, ಬಸವಣ್ಣನ ನಾಡಿನಲ್ಲಿ ಇಂತಹ ಕೃತ್ಯ ಸರಿಯಲ್ಲ. ಸರಕಾರವೇ ತ್ವರಿತಗತಿಯಲ್ಲಿ ಕ್ರಮಕ್ಕೆ ಮುಂದಾಗಬೇಕಿತ್ತು. ಆದರೆ, ಈವರೆಗೂ ಮಗು ಪತ್ತೆ ಕಾರ್ಯ ಆಗಿಲ್ಲ. ತ್ವರಿತಗತಿಯಲ್ಲಿ ತನಿಖೆ ನಡೆಸಿ ಕಾನೂನು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News