ಸೈಬರ್ ವಂಚಕರಿಗೆ ಸಿಮ್‍ಕಾರ್ಡ್ ಪೂರೈಕೆ; ಮೂವರು ಸಿಐಡಿ ಬಲೆಗೆ

Update: 2021-09-17 17:40 GMT

ಬೆಂಗಳೂರು, ಸೆ.17: ಸಾಮಾಜಿಕ ಜಾಲತಾಣಗಳ ಮೂಲಕ ಸುಂದರ ಯುವತಿಯರ ಸೋಗಿನಲ್ಲಿ ಯುವಕರನ್ನು ಪರಿಚಯಿಸಿಕೊಂಡು ಲೈಂಗಿಕ ಸಂಭಾಷಣೆಯಲ್ಲಿ ತೊಡಗುವಂತೆ ಪ್ರೇರೇಪಿಸಿ, ಅವರಿಗೆ ತಿಳಿಯದಂತೆ ಅವರ ನಗ್ನ ವಿಡಿಯೊ ಸೆರೆಹಿಡಿದು ಬೆದರಿಕೆವೊಡ್ಡಿ ಹಣ ವಸೂಲಿ ಮಾಡುತ್ತಿದ್ದ ವಂಚಕರಿಗೆ ಸಿಮ್‍ಕಾರ್ಡ್ ಪೂರೈಕೆ ಮಾಡುತ್ತಿದ್ದ ಬೃಹತ್ ಜಾಲವನ್ನು ಸಿಐಡಿ ಸೈಬರ್ ಅಪರಾಧ ವಿಭಾಗದ ಪೊಲೀಸರು ಭೇದಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಹಮ್ಮದ್ ಮುಜಾಹಿದ್, ಇಕ್ಬಾಲ್, ಅಸೀಫ್ ಎಂಬುವರನ್ನು ಬಂಧಿಸಿರುವ ಸಿಐಡಿ ಪೊಲೀಸರು, ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಜು.21ರಂದು ಇಲ್ಲಿನ ಸಿಐಡಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನನ್ವಯ ತನಿಖಾಧಿಕಾರಿಗಳು, ಹರಿಯಾಣದ ನೂಹ್, ಪುನ್ಹಾನ ಮತ್ತು ಪಲ್ವಾಲ ಸೇರಿದಂತೆ ಇನ್ನಿತರೆ ಸ್ಥಳಗಳಿಗೆ ಭೇಟಿ ನೀಡಿ, ಅಕ್ರಮವಾಗಿ ಸಿಮ್‍ಕಾರ್ಡ್, ಇ-ವ್ಯಾಲೆಟ್‍ಗಳನ್ನು ಸಕ್ರಿಯಗೊಳಿಸಿ, ಅವುಗಳನ್ನು ಆರೋಪಿಗಳಿಗೆ ಬಂಧಿತರು ಒದಗಿಸುತ್ತಿದ್ದರು ಎನ್ನುವ ಮಾಹಿತಿ ಗೊತ್ತಾಗಿದೆ.

ಬಂಧಿತರ ಪೈಕಿ ಮುಹಮ್ಮದ್ ಮುಜಾಹಿದ್, ಸಿಮ್‍ಕಾರ್ಡ್ ವಿತರಕರಿಗೆ ನಕಲಿ ದಾಖಲಾತಿಗಳನ್ನು ಒದಗಿಸಿ, ನಕಲಿ ಹೆಸರಿನಲ್ಲಿ ಸಿಮ್‍ಕಾರ್ಡ್‍ಗಳ ತಯಾರಿಸಿರುವುದಲ್ಲದೆ, ಬರೀ ಹತ್ತು ತಿಂಗಳಿನಲ್ಲಿಯೇ ಬರೋಬ್ಬರಿ 5 ಸಾವಿರಕ್ಕೂ ಅಧಿಕ ಸಿಮ್‍ಕಾರ್ಡ್‍ಗಳನ್ನು ಸೈಬರ್ ವಂಚಕರಿಗೆ ತಲುಪಿಸಿದ್ದು, ಇದರಲ್ಲಿ ಅಸೀಫ್ ಸಹ ಕೈಜೋಡಿಸಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.

ಇಕ್ಬಾಲ್ ಎಂಬಾತ ಕಂಪ್ಯೂಟರ್ ಪ್ರಿಂಟಿಂಗ್ ಹಾಗೂ ಜೆರಾಕ್ಸ್ ಅಂಗಡಿ ಹೊಂದಿದ್ದು, ನಕಲಿ ಆಧಾರ ಕಾರ್ಡ್ ತಯಾರಿಕೆ ಮಾಡುತ್ತಿದ್ದ. ಜತೆಗೆ, ಮುಜಾಹಿದ್ ಹಾಗೂ ಅಸೀಫ್‍ನೊಂದಿಗೆ ಕೈಜೋಡಿಸಿ ಕೃತ್ಯವೆಸಗಿದ್ದ ಎಂದು ಸಿಐಡಿ ತಿಳಿಸಿದೆ.

ಆರೋಪಿಗಳು ಸಿಮ್‍ಕಾರ್ಡ್‍ಗಳನ್ನು ತಯಾರಿಕೆ ಮಾಡಿಕೊಂಡು ರಾಜಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ಸೈಬರ್ ವಂಚಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಆರೋಪಿಗಳು ದೇಶದ್ಯಾಂತ 3951 ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಸಿಐಡಿ ಪ್ರಕಟನೆಯಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News