ನಿರುದ್ಯೋಗ ದಿನ ಆಚರಣೆ ಜತೆಗೆ ಪ್ರಧಾನಿಗೆ ನಿಮ್ಮ ಪದವಿ ಪ್ರಮಾಣ ಪತ್ರ ಹಿಂದಿರುಗಿಸಿ: ಯುವಕರಿಗೆ ಡಿಕೆಶಿ ಕರೆ

Update: 2021-09-18 12:23 GMT

ಬೆಂಗಳೂರು, ಸೆ.18: ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ನುಡಿದಂತೆ ನಡೆದುಕೊಳ್ಳಲು ವಿಫಲರಾಗಿದ್ದಾರೆ. ಹೀಗಾಗಿ ನಿರುದ್ಯೋಗ ದಿನ ಆಚರಣೆ ಜತೆಗೆ ನಿರುದ್ಯೋಗಿ ಯುವಕರು ತಮ್ಮ ಪದವಿ ಪ್ರಮಾಣ ಪತ್ರವನ್ನು ಮೋದಿ ಅವರಿಗೆ ಹಿಂದಿರುಗಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆಕೊಟ್ಟಿದ್ದಾರೆ.

ಶನಿವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕಾರಣಿಗಳು ನುಡಿದಂತೆ ನಡೆಯಬೇಕು. ಅದೇ ನಮ್ಮ ನೀತಿ ಹಾಗೂ ಧರ್ಮ. ನಾವು ಜನರ ಸೇವೆ ಮಾಡಲು ಬಂದಿದ್ದು, ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಇದನ್ನು ನಮ್ಮ ದೇಶ ಹಾಗೂ ನಾಡಿನ ಎಲ್ಲ ಧರ್ಮದಲ್ಲೂ ಬಸವಣ್ಣನವರ ಕಾಲದಿಂದಲೂ ನಾಯಕರು ಪ್ರತಿಪಾದಿಸಿಕೊಂಡು ಬಂದಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಮಾತು ಕೊಟ್ಟಿದ್ದರು. 2 ಕೋಟಿ ಸರಕಾರಿ ಉದ್ಯೋಗ ನೀಡಲು ಸಾಧ್ಯವಾಗದಿದ್ದರೂ ಕನಿಷ್ಠ ಖಾಸಗಿ ಉದ್ಯೋಗಗಳಾದರೂ ಸೃಷ್ಟಿಯಾಗುವಂತೆ ಮಾಡಬೇಕಿತ್ತು. ಉದ್ಯೋಗ ಸೃಷ್ಟಿಗೆ ಅಗತ್ಯ ನೀತಿ ರೂಪಿಸಬೇಕಾಗಿತ್ತು ಎಂದು ಶಿವಕುಮಾರ್ ಹೇಳಿದರು.

ಕೋವಿಡ್ ಸಂದರ್ಭದಲ್ಲಿ ದೇಶದಲ್ಲಿ 2 ಕೋಟಿ ಉದ್ಯೋಗ ನಷ್ಟವಾಗಿದೆ. ಸರಕಾರ ಉದ್ಯೋಗ ಸೃಷ್ಟಿ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ಜನ್ಮದಿನವನ್ನು ನಮ್ಮ ಯುವ ಕಾಂಗ್ರೆಸ್ ವತಿಯಿಂದ ನಿರುದ್ಯೋಗ ದಿನವನ್ನಾಗಿ ಆಚರಣೆ ಮಾಡಿದ್ದಾರೆ. ಇದರಲ್ಲಿ ತಪ್ಪೇನಿದೆ? ಎಂದು ಅವರು ಪ್ರಶ್ನಿಸಿದರು.

ಕೇವಲ ನಿರುದ್ಯೋಗ ದಿನ ಆಚರಣೆ ಮಾಡುವುದಷ್ಟೇ ಅಲ್ಲ, ಎಲ್ಲ ನಿರುದ್ಯೋಗಿ ಯುವಕರು ತಮ್ಮ ಪದವಿ ಪ್ರಮಾಣ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಿಂದಿರುಗಿಸಬೇಕೆಂದು ಕರೆ ನೀಡುತ್ತೇನೆ ಎಂದು ಶಿವಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News