ಮೂರು ತಿಂಗಳಲ್ಲಿ ಎಲ್ಲರಿಗೂ ಹೆಲ್ತ್ ಕಾರ್ಡ್: ಸಚಿವ ಡಾ. ಸುಧಾಕರ್

Update: 2021-09-18 13:19 GMT
ಸಚಿವ ಡಾ. ಸುಧಾಕರ್ (File Photo)

ಬೆಂಗಳೂರು, ಸೆ. 18: ‘ಮುಂದಿನ ಮೂರು ತಿಂಗಳಲ್ಲಿ ಎಲ್ಲರ ಮನೆಗೆ ‘ಆಯುಷ್ಮಾನ್ ಆರೋಗ್ಯ ಕಾರ್ಡ್' ತಲುಪಿಸುವ ಅಭಿಯಾನ ಹಮ್ಮಿಕೊಳ್ಳಲಾಗುವುದು. ಈಗಾಗಲೇ ಒಂದೂವರೆ ಕೋಟಿ ಜನರಿಗೆ ಹೆಲ್ತ್ ಕಾರ್ಡ್ ನೀಡಿದ್ದು, ಇನ್ನೂ ಎರಡೂವರೆ ಕೋಟಿ ಕಾರ್ಡ್‍ಗಳನ್ನು ನೀಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಸಿಎಂ ಆಗಿ ಹಾಗೂ ಪ್ರಧಾನಿಯಾಗಿ ಅಕ್ಟೋಬರ್2ಕ್ಕೆ 20 ವರ್ಷ ಆಡಳಿತ ನಡೆಸಿದ್ದು, ಸಾಧನೆ. ಹೀಗಾಗಿ ಅಕ್ಟೋಬರ್ 2ರವರೆಗೆ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.

ಅಂಗಾಂಗ ದಾನ ಆಂದೋಲನ: ದೊಡ್ಡ ಪ್ರಮಾಣದಲ್ಲಿ ಅಂಗಾಂಗ ದಾನದ ಆಂದೋಲನವನ್ನು ಹಮ್ಮಿಕೊಳ್ಳಲಾಗುವುದು. ಮುಖ್ಯಮಂತ್ರಿ, ತಾವು, ಹಲವು ಸಚಿವರು ಹಾಗೂ ಅಧಿಕಾರಿಗಳು ಅಂಗಾಂಗ ದಾನ ಮಾಡುವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಿದ್ದೇವೆ ಎಂದು ಅವರು ವಿವರಿಸಿದರು.

ಮೃತ ವ್ಯಕ್ತಿಯೊಬ್ಬ 8 ಜನರಿಗೆ ಅಂಗಾಂಗ ದಾನ ಮಾಡಬಹುದು. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಶ್ವಾಸಕೋಶ, ಮೂತ್ರಪಿಂಡ, ನೇತ್ರ, ಮೊದಲಾದ ಅಂಗಗಳನ್ನು ದಾನ ಮಾಡಬಹುದಾಗಿದೆ. ರಾಜ್ಯದಲ್ಲಿ ವಿಭಾಗವಾರು ‘ಆರ್ಗನ್ ರೆಟ್ರಿವಲ್ ಕೇಂದ್ರ' ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದರು.

ಏಳೆಂಟು ತಿಂಗಳಿನಿಂದ 250 ತಜ್ಞರು ಆರೋಗ್ಯಕ್ಕೆ ಸಂಬಂಧಿಸಿದಂತೆ ವಿಷನ್ ಡಾಕ್ಯೂಮೆಂಟ್ ತಯಾರಿಸಿದ್ದು, ಅದನ್ನು ನಮಗೆ ನೀಡುತ್ತಾರೆ. ಸಿಎಂ ಹಾಗೂ ನಾನು ಅದನ್ನು ಪ್ರಧಾನಿಯವರಿಗೆ ಸಲ್ಲಿಸುತ್ತೇವೆ. ಅದರಲ್ಲಿ ಯಾವ ರೀತಿ ಸಮಸ್ಯೆಗಳು ಉದ್ಭವಿಸುತ್ತವೆ. ಪರಿಹಾರ ಏನು ಎಂಬ ಮಾಹಿತಿ ಇದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ವಿಷನ್ ಡಾಕ್ಯೂಮೆಂಟ್ ಮಾಡಲಾಗಿದೆ ಎಂದರು.

ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಇನ್ನು ಮಾರ್ಗಸೂಚಿ ಪ್ರಕಟವಾಗಿಲ್ಲ. ಹಾಗೆಯೇ ಎರಡು ಡೋಸ್ ಲಸಿಕೆ ಪಡೆದವರಿಗೆ ಬೂಸ್ಟರ್ ಪಡೆಯುವ ಬಗ್ಗೆಯೂ ಮಾರ್ಗಸೂಚಿ ಪ್ರಕಟವಾಗಿಲ್ಲ. ಕೋವಿಡ್ ಸಂಬಂಧಿಸಿದ ವಿಪಕ್ಷಗಳ ಟೀಕೆಗೆ ಸದನದಲ್ಲೇ ಉತ್ತರ ನೀಡುತ್ತೇವೆ ಎಂದು ಅವರು ತಿಳಿಸಿದರು.

‘ಧರ್ಮ ಮತ್ತು ಅದರ ರಕ್ಷಣೆ ಬಗ್ಗೆ ಕಾಂಗ್ರೆಸ್‍ನಿಂದ ಪಾಠ ಕಲಿಯುವ ಅಗತ್ಯ ನಮಗಿಲ್ಲ. ಕಾನೂನು ಅನ್ವಯ ಕೆಲ ಚಟುವಟಿಕೆಗಳು ನಡೆದಿವೆ. ದೇವರು, ಧರ್ಮದ ಬಗ್ಗೆ ನಮ್ಮಿಂದ ಬೇರೆಯವರು ಕಲಿಯಬೇಕೇನೋ? ಧರ್ಮವನ್ನು ಹೇಗೆ ರಕ್ಷಣೆ ಮಾಡಬೇಕೆಂದು ನಮಗೆ ಗೊತ್ತು. ಯಾರ ಭಾವನೆಗೂ ಧಕ್ಕೆಯಾಗದಂತೆ ಆಗಿರುವ ತಪ್ಪುಗಳನ್ನು ಸರಕಾರ ಸರಿಪಡಿಸಲಿದೆ'
-ಡಾ.ಕೆ.ಸುಧಾಕರ್, ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News