ಎಸ್. ನಟರಾಜ್ ಬೂದಾಳು ಅವರ ‘ಸರಹಪಾದ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿಯ ಅನುವಾದ ಪ್ರಶಸ್ತಿ

Update: 2021-09-18 15:11 GMT
ಎಸ್. ನಟರಾಜ್ ಬೂದಾಳು (Photo: avadhimag.in)

ಬೆಂಗಳೂರು, ಸೆ.18: ಸಾಹಿತಿ, ಸಾಂಸ್ಕೃತಿಕ ಚಿಂತಕ ಡಾ.ಎಸ್.ನಟರಾಜ ಬೂದಾಳು ಅವರ ಅನುವಾದಿತ ‘ಸರಹಪಾದ’ ಕೃತಿಗೆ 2020ನೆ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ ಲಭಿಸಿದೆ.

ಶನಿವಾರ ಹೊಸದಿಲ್ಲಿಯ ರವೀಂದ್ರ ಭವನದಲ್ಲಿ ಕೇಂದ್ರ ಸಾಹಿತ್ಯ ಅಕಾದೆಮಿಯ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 24 ಅನುವಾದಿಸಲ್ಪಟ್ಟ ಪುಸ್ತಕಗಳಿಗೆ 2020ನೆ ಸಾಲಿನ ಅನುವಾದ ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಯಿತು.

ಶ್ರಮಣ ಪರಂಪರೆಗಳಾದ ಸಿದ್ಧ, ನಾಥ, ಆರೂಢ, ಬೌದ್ಧ, ತತ್ವಪದ ಮೊದಲಾದವುಗಳ ತಾತ್ವಿಕತೆಗಳನ್ನು ಚರ್ಚೆಗೆ ತಂದಿರುವವರಲ್ಲಿ ನಟರಾಜ ಬೂದಾಳು ಪ್ರಮುಖರು. ಮಹಾಬೌದ್ಧ ಸಿದ್ಧ ಸರಹಪಾದನ ವಿಚಾರಗಳನ್ನು ಅವರು ‘ಸರಹಪಾದ’ ಕೃತಿಯ ಮೂಲಕ ಕನ್ನಡಕ್ಕೆ ತಂದಿದ್ದಾರೆ. 

ಇದಲ್ಲದೆ, ವಿವೇಕ್ ಶಾನಭಾಗ್ ಅವರ ‘ಗಾಚರ್ ಗೋಚರ್’ ಕನ್ನಡ ಕೃತಿಯನ್ನು ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಿದ ಶ್ರೀನಾಥ್ ಪೆರೂರ್, ಗೋಪಾಲಕೃಷ್ಣ ಪೈ ಅವರ ‘ಸ್ವಪ್ನ ಸಾರಸ್ವತ’ ಕನ್ನಡ ಕಾದಂಬರಿಯನ್ನು ಕೊಂಕಣಿ ಭಾಷೆಗೆ ಭಾಷಾಂತರಗೊಳಿಸಿದ ಜಯಶ್ರೀ ಶಾನಭಾಗ್, ಚಂದ್ರಶೇಖರ ಕಂಬಾರ ಅವರ `ಶಿಖರಸೂರ್ಯ’ ಕನ್ನಡ ಕಾದಂಬರಿಯನ್ನು ಮಲಯಾಳಂ ಭಾಷೆಗೆ ಅನುವಾದಿಸಿದ ಸುಧಾಕರನ್ ರಾಮನ್‍ತಲಿ, ಹಾಗೂ ಶಾಂತಿನಾಥ ದೇಸಾಯಿಯವರ `ಓಂ ನಮೋ’ ಕಾದಂಬರಿಯನ್ನು ತೆಲುಗಿಗೆ ಅನುವಾದಿಸಿದ ರಂಗನಾಥ ರಾಮಚಂದ್ರರಾವ್ ಅವರಿಗೆ ಕೇಂದ್ರ ಸಾಹಿತ್ಯ ಅನುವಾದ ಪ್ರಶಸ್ತಿ ಲಭಿಸಿದೆ ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ. 

'ಎಲ್ಲವೂ ಗುರುಪಾದಕ್ಕೆ'
ಸಾಧಕ ಪರಂಪರೆಯಲ್ಲಿ ಶ್ರಮಣ ಪರಂಪರೆ ದೊಡ್ಡದು. ಇದರ ಮಹಾಗುರು ಸರಹಪಾದ. ಆತನ ಚಿಂತನೆಗಳು ಕನ್ನಡಕ್ಕೆ ಬಂದಿದ್ದು, ಅದನ್ನು ಕೇಂದ್ರ ಸಾಹಿತ್ಯ ಅಕಾದೆಮಿ ಗುರುತಿಸಿರುವುದು ಈ ನೆಲದ ಸಿದ್ದ ಪರಂಪರೆಗೆ ಸಂದ ಗೌರವ. ಎಲ್ಲವೂ ಗುರುಪಾದಕ್ಕೆ. 
-ಡಾ.ಎಸ್.ನಟರಾಜ ಬೂದಾಳು, ಸರಹಪಾದ ಕೃತಿಯ ಲೇಖಕರು

ಸಾಹಿತ್ಯ ಅಕಾಡಮಿಯ ಅನುವಾದ ಪ್ರಶಸ್ತಿಗೆ ಆಯ್ಕೆಯಾದ ಕೃತಿಗಳ ಪಟ್ಟಿ ಇಲ್ಲಿದೆ:

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News