ರಾಜ್ಯದಲ್ಲಿ ಒಂದು ಸಾವಿರ ಎಲೆಕ್ಟ್ರಿಕ್ ವಾಹನಗಳ ರೀಚಾರ್ಜಿಂಗ್ ಕೇಂದ್ರ ಸ್ಥಾಪನೆ: ಸಚಿವ ಸುನೀಲ್ ಕುಮಾರ್

Update: 2021-09-18 15:08 GMT
ಸುನೀಲ್ ಕುಮಾರ್

ಬೆಂಗಳೂರು, ಸೆ.18: ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿದ್ಯುತ್‍ಚಾಲಿತ(ಎಲೆಕ್ಟ್ರಿಕ್) ವಾಹನಗಳ ಬಳಕೆಗೆ ಉತ್ತೇಜನ ನೀಡಲು ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಒಂದು ಸಾವಿರ ರೀಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ತಿಳಿಸಿದರು.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಸಾವಿರ ರೀಚಾರ್ಜಿಂಗ್ ಕೇಂದ್ರಗಳ ಪೈಕಿ 500 ಕೇಂದ್ರಗಳನ್ನು ರಾಜಧಾನಿ ಬೆಂಗಳೂರಿನಲ್ಲಿ ಆರಂಭಿಸಲಾಗುವುದು. ಈಗಾಗಲೆ ಬೆಂಗಳೂರಿನಲ್ಲಿ 136 ಕಡೆಗಳಲ್ಲಿ ಇಂತಹ ರೀಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಭವಿಷ್ಯದ ದಿನಗಳಲ್ಲಿ ವಿದ್ಯುತ್ ಚಾಲಿತ ವಾಹನಗಳು ನಮಗೆ ಅನಿವಾರ್ಯವಾಗಲಿವೆ. ಆದುದರಿಂದ, ಈಗಿನಿಂದಲೆ ಅದಕ್ಕೆ ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಸರಕಾರಿ ಕಚೇರಿಗಳು, ಅಪಾರ್ಟ್‍ಮೆಂಟ್‍ಗಳು, ಮಾಲ್‍ಗಳು, ಪ್ರವಾಸೋದ್ಯಮ ಸ್ಥಳಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈ ರೀಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸಬೇಕೆಂಬ ಆಲೋಚನೆಯಿದೆ ಎಂದು ಅವರು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿದ್ಯುತ್‍ಚಾಲಿತ ವಾಹನಗಳಿಗೆ ಬೇಕಾದ ಅಗತ್ಯ ಸೌಕರ್ಯ ಒದಗಿಸಲು ಯೋಜನೆಗಳನ್ನು ರೂಪಿಸಲಿವೆ. ರೀಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ ಹೆಚ್ಚುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಈ ಬಗ್ಗೆ ವಾಹನ ತಯಾರಿಸುವ ಕಂಪೆನಿಗಳ ಪ್ರಮುಖರ ಜೊತೆಯೂ ಚರ್ಚೆ ನಡೆಸಲಾಗುವುದು ಎಂದು ಸುನೀಲ್ ಕುಮಾರ್ ತಿಳಿಸಿದರು.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಮುನಿರತ್ನ, ಈಗಾಗಲೆ ಅಸ್ತಿತ್ವದಲ್ಲಿರುವ ಪೆಟ್ರೋಲ್ ಬಂಕ್‍ಗಳ ಬಳಿಯೆ ವಿದ್ಯುತ್ ಚಾಲಿತ ವಾಹನಗಳ ರೀಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪನೆ ಮಾಡುವುದು ಉತ್ತಮ. ಜೊತೆಗೆ, ಪೆಟ್ರೋಲ್ ಬಳಕೆಯಿಂದ ಕಾರ್ಯನಿರ್ವಹಿಸುವ ವಾಹನಗಳಿಗಿಂತ ಕಡಿಮೆ ದರದಲ್ಲಿ ವಿದ್ಯುತ್ ಚಾಲಿತ ವಾಹನಗಳು ಲಭ್ಯವಾದರೆ ಸಾರ್ವಜನಿಕರ ಬಳಕೆ ಹೆಚ್ಚಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News