ಶೇ.5ರಷ್ಟು ದಲಿತ ಮನಸ್ಥಿತಿ ದೂರ ಮಾಡಲು ಸಾಧ್ಯವಾಗಿಲ್ಲ: ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಬೇಸರ

Update: 2021-09-18 15:16 GMT
ಕೇಂದ್ರ ಸಚಿವ ಎ. ನಾರಾಯಣಸ್ವಾಮಿ (File Photo)

ಬೆಂಗಳೂರು, ಸೆ. 18: ‘ಅರವತ್ತು ವರ್ಷಗಳಿಂದ ದಲಿತ ಸಮುದಾಯದವರು ಹೋರಾಟ ಮಾಡುತ್ತಿದ್ದರೂ ಯಾವುದೇ ಸಮಸ್ಯೆಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಹೀಗಾಗಿ ದೇಶದಲ್ಲಿ ಸಾಮಾಜಿಕ ಸಂಘಟನೆಗಳು ಅಸ್ತಿತ್ವದಲ್ಲಿವೆಯೆ ಎಂಬ ಸಂಶಯವಿದೆ' ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ನಾರಾಯಣಸ್ವಾಮಿ ತಿಳಿಸಿದ್ದಾರೆ.

ಶನಿವಾರ ಅರಮನೆ ರಸ್ತೆಯಲ್ಲಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಕರ್ನಾಟಕ ದಲಿತ ಉದ್ದಿಮೆದಾರರ ಸಂಘದಿಂದ ಏರ್ಪಡಿಸಿದ್ದ ದಲಿತ ಉದ್ದಿಮೆದಾರರ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಸೂದೆಗಳು ಅನುಮೋದನೆ ದೊರೆಯುತ್ತವೆ. ಆದರೆ, ಕಾನೂನು ಆಗುವುದಿಲ್ಲ. ಕೆಲವು ಕಾನೂನು ಆದರೂ, ಅದನ್ನು ಕಾರ್ಯಗತಗೊಳ್ಳುವುದಿಲ್ಲ ಎಂದರು.

ಎಸ್ಸಿ-ಎಸ್ಟಿ ಜಾಗೃತಿ ಸಮಿತಿಗೆ ಮುಖ್ಯಮಂತ್ರಿ ಅವರೇ ಅಧ್ಯಕ್ಷರು ಆಗಿದ್ದಾರೆ. ಆದರೆ, ಎಲ್ಲಿಯೂ ಚರ್ಚೆಗೆ ಮುನ್ನೆಲೆಗೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷವಾದರೂ ಶೇ.5ರಷ್ಟು ದಲಿತರ ಮನಸ್ಥಿತಿಯನ್ನು ದೂರ ಮಾಡಲು ಸಾಧ್ಯವಾಗಿಲ್ಲ ಎಂದರು.

ಕೆಲವು ಅಧಿಕಾರಿಗಳು, ಉದ್ದಿಮೆದಾರರು ಕೆಳವರ್ಗದ ಜಾತಿಯಿಂದ ಬಂದಿದ್ದರೂ ತಮ್ಮ ಮೂಲ ನೆಲೆಯನ್ನೆ ಮರೆತುಬಿಡುತ್ತಾರೆ. ಪ್ರತಿ ಜಿಲ್ಲೆಗೂ ಹೋಗಿ ಸಂವಾದ ಮಾಡಬೇಕು. ಅರ್ಹ ವಿದ್ಯಾವಂತರನ್ನು ಗುರುತಿಸಿ, ಅವರಿಗೆ ಉದ್ಯೋಗಕ್ಕೆ ಮತ್ತು ಉದ್ದಿಮೆದಾರರಾಗಲು ನೆರವಾಗುವ ಅಗತ್ಯವಿದೆ ಎಂದು ಅವರು ಹೇಳಿದರು

ದಲಿತ ವರ್ಗದಲ್ಲಿ ತಾಂತ್ರಿಕ ಪರಿಣತಿ ಪಡೆದವರು, ಸ್ವಯಂ ಉದ್ಯೋಗಿಗಳಾಗಬೇಕು. ಹಣಕಾಸಿನ ವ್ಯವಸ್ಥೆ, ಸಾಲ ಪಡೆಯುವ ನಿಯಮಗಳು, ದಾಖಲೆಗಳ ಸಲ್ಲಿಕೆ ಬಗ್ಗೆ ಅಗತ್ಯ ಸಂವಾದ ನಡೆಸಬೇಕು ಎಂದು ಸಲಹೆ ಮಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಸಮಾಜದ ವಂಚಿತ ಸಮುದಾಯದ ವ್ಯಕ್ತಿಯಾಗಿ ಮಾತನಾಡುವುದು ಮುಖ್ಯ ಎಂದರು.

ಉದ್ದಿಮೆದಾರರಿಗೆ ಸಾಲ ಸೌಲಭ್ಯ ಹೆಚ್ಚಿಸಬೇಕು: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ, ‘ದಲಿತರನ್ನು ಆರ್ಥಿಕ ಸಬಲೀಕರಣಕ್ಕೆ ಕ್ರಮ ವಹಿಸಬೇಕು. ಕೆಎಸ್‍ಎಫ್‍ಸಿ ಶೇ.75ರಷ್ಟು ಸಹಾಯಧನ ನೀಡುತ್ತೇವೆ, ಉಳಿದ ಶೇ.25ರಷ್ಟು ಹಣ ಪಾವತಿಸಿ ಎಂದು ಹೇಳುತ್ತಾರೆ. ಆದರೆ, ಶೇ.25ರಷ್ಟು ಹಣವನ್ನು ಸಾಲ ನೀಡಬೇಕು ಎಂದು ಆಗ್ರಹಿಸಿದರು.

ರೈತರಿಗೆ 3ಲಕ್ಷ ರೂ.ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವ್ಯವಸ್ಥೆ ಇದೆ. ಅದರಂತೆ ದಲಿತರಿಗೆ ಕನಿಷ್ಠ 3 ಲಕ್ಷ ರೂ.ದಿಂದ 5ಕೋಟಿ ರೂ.ವರೆಗೆ ಶೂನ್ಯ ಬಡ್ಡಿದರದ ಸಾಲ ನೀಡಬೇಕು. ಈಗ ರಾಜ್ಯ ಸರಕಾರ ಎಲ್ಲ ಉದ್ದಿಮೆಗಳಿಗೆ ಶೇ.4 ಬಡ್ಡಿದರದ ಸಾಲ ನೀಡುತ್ತಿದೆ. ಈ ಶೇ.4ರ ಬಡ್ಡಿ ಮೊತ್ತವನ್ನು ಕೇಂದ್ರ ಸರಕಾರ ಪಾವತಿಸಬೇಕು ಎಂದು ಹನುಮಂತಯ್ಯ ಕೋರಿದರು.

ರಾಜ್ಯದಲ್ಲಿನ ಎಲ್ಲ ಪ್ರೋತ್ಸಾಹಧನ, ಸಬ್ಸಿಡಿ ಯೋಜನೆಗಳನ್ನು ಕೇಂದ್ರ ಸರಕಾರದಲ್ಲಿ ಜಾರಿಗೊಳಿಸಬೇಕು. ಇದರಿಂದ ದೇಶದ ಎಲ್ಲ ದಲಿತ ಉದ್ದಿಮೆದಾರರಿಗೆ ಅನುಕೂಲವಾಗಲಿದೆ. ಅಖಿಲ ಭಾರತ ದಲಿತ ಉದ್ದಿಮೆದಾರರ ಸಂಘ ಸ್ಥಾಪಿಸುವ ಆಶಯವಿದ್ದು, ಅದಕ್ಕೆ ಪೂರಕ ವಾತಾವರಣ ಕಲ್ಪಿಸಬೇಕು ಎಂದು ಅವರು ತಿಳಿಸಿದರು.

ಕೊಳ್ಳೆಗಾಲ ಕ್ಷೇತ್ರದ ಶಾಸಕ ಎನ್.ಮಹೇಶ್ ಮಾತನಾಡಿ, ದೇಶದಲ್ಲಿ ದಲಿತ-ಹಿಂದುಳಿದ ವರ್ಗ ಅಭಿವೃದ್ದಿಯಾಗದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ದಲಿತರಿಗೆ ಹೆಚ್ಚಿನ ಮೊತ್ತದ ಸಾಲಸೌಲಭ್ಯ ನೀಡುವ ಮೂಲಕ ಅವರು ಉದ್ದಿಮೆದಾರರಾಗಿ ಬೆಳೆಯಲು ಹಾಗೂ ಆರ್ಥಿಕವಾಗಿ ಸಬಲರಾಗಲು ನೆರವು ನೀಡಬೇಕು ಎಂದು ಆಗ್ರಹಿಸಿದರು.

ದಲಿತ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಶ್ರೀನಿವಾಸ್, ದಲಿತ ಮುಖಂಡ ವೆಂಕಟಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ನಾಗಾಂಬಿಕಾ ದೇವಿ, ಶಿವಪ್ರಸಾದ್, ರವಿಕುಮಾರ್ ಎನ್., ಸತ್ಯವತಿ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News