ಒಂದೇ ಕುಟುಂಬದ ಐವರು ಆತ್ಮಹತ್ಯೆ ಪ್ರಕರಣ: ಪತ್ನಿ ವಿರುದ್ಧ ಸಂಪಾದಕ ಶಂಕರ್ ಆರೋಪ

Update: 2021-09-18 16:25 GMT

ಬೆಂಗಳೂರು, ಸೆ.18: ಒಂದೇ ಕುಟುಂಬದ ಐವರು ಆತ್ಮಹತ್ಯೆ ಪ್ರಕರಣಕ್ಕೆ ಕೌಟುಂಬಿಕ ಕಲಹವೇ ಪ್ರಮುಖ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಮೃತ ಪತ್ನಿ ಭಾರತಿ ವಿರುದ್ಧ ವಾರಪತ್ರಿಕೆವೊಂದರ ಸಂಪಾದಕ ಹಲ್ಲೆಗೆರೆ ಶಂಕರ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಘಟನೆ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿರುವ ಅವರು, 2020 ಫೆಬ್ರವರಿಯಲ್ಲಿ ಆಂಧ್ರದ ಗೋರ್ಲಾಂಟದ ಶ್ರೀಕಾಂತ್ ಎಂಬುವರ ಜತೆ ಸಿಂಧುರಾಣಿ ವಿವಾಹವಾಗಿತ್ತು. ಶ್ರೀಕಾಂತ್ ತನ್ನ ತಂದೆ-ತಾಯಿ ಜತೆ ಹಾಗೂ ಪತ್ನಿಯ ಜತೆ ಕಾಡುಗೋಡಿಯಲ್ಲಿ ಮನೆ ಮಾಡಿಕೊಂಡು ವಾಸವಿದ್ದರು. ಸೀಮಂತಕ್ಕೆ ಬಂದ ಮಗಳು ಹೆರಿಗೆಯಾದರೂ ಗಂಡನ ಮನೆಗೆ ಹೋಗಲು ಒಪ್ಪುತ್ತಿರಲಿಲ್ಲ. ಇನ್ನು 2015ರಲ್ಲಿ ಸಿಂಚನಾ, ಪ್ರವೀಣ್ ಎಂಬಾತನ ಜತೆ ವಿವಾಹವಾಗಿದ್ದರು. ಇವರು ಜಕ್ಕೂರ್‍ನಲ್ಲಿ ತಮ್ಮ ಕುಟುಂಬಸ್ಥರ ಜತೆ ನೆಲೆಸಿದ್ದರು. ಸಿಂಚನಾ ಕೂಡ ಮಗುವಿನ ಹೆರಿಗೆಗೆ ತವರು ಮನೆಗೆ ಬಂದು ಗಂಡನ ಮನೆಗೆ ಹೋಗಿರಲಿಲ್ಲ. ಇಬ್ಬರ ಹೆಣ್ಣುಮಕ್ಕಳ ಜೀವನ ಒಂದೇ ರೀತಿಯಾಗಲು ತಾಯಿ ಭಾರತಿ ಕಾರಣ ಎಂದು ಆರೋಪಿಸಿದರು.

ಸಿಂಧುರಾಣಿ ಹಾಗೂ ಶ್ರೀಕಾಂತ್ ದಂಪತಿಯ ಒಂಬತ್ತು ತಿಂಗಳ ಮಗುವಿಗೆ ನಾಮಕರಣ ಮಾಡಲು ಎಲ್ಲ ಸಿದ್ಧತೆಗಳು ನಡೆದಿದ್ದವು. ಶಾಸ್ತ್ರದಂತೆ ಮಗುವಿಗೆ ಕಿವಿ ಚುಚ್ಚಿಸುವ ವಿಷಯಕ್ಕೆ ಎರಡು ಕುಟುಂಬಗಳ ನಡುವೆ ಜಗಳವಾಗಿತ್ತು. ಶ್ರೀಕಾಂತ್ ಕುಟುಂಬ ಮಗುವಿಗೆ ಕಿವಿ ಚುಚ್ಚಿಸಬಾರದೆಂದು ತಕರಾರು ತೆಗೆದಿದ್ದರು. ಆದರೆ, ಶಂಕರ್ ಕುಟುಂಬ ಕಿವಿ ಚುಚ್ಚಿಸಬೇಕು ಎಂಬ ಹಠಕ್ಕೆ ಬಿದ್ದಿತ್ತು. ಈ ವೇಳೆ ಸಿಂಧುರಾಣಿಗೆ ಕರೆ ಮಾಡಿದ ಶ್ರೀಕಾಂತ್ ಮೊಬೈಲ್‍ನಲ್ಲಿ ತನ್ನ ಪತ್ನಿಗೆ ಬೈದಿದ್ದರು. ನಂತರ ಮಗಳಿಗೆ ಬುದ್ಧಿವಾದ ಹೇಳಿದ್ದೆ. ಇದರಿಂದ ಮನನೊಂದ ಸಿಂಧುರಾಣಿ 25-30 ಮಾತ್ರೆ ತಿಂದು ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ಬಗ್ಗೆ ಪೊಲೀಸರು ಸಿಂಧುರಾಣಿ ಹೇಳಿಕೆ ಪಡೆದಾಗ ನನ್ನ ಹಾಗೂ ಅಳಿಯನ ವಿರುದ್ಧ ದೂರು ನೀಡಿದ್ದಳು ಎಂದು ಶಂಕರ್ ದೂರಿದರು.

ಹೆಣ್ಣುಮಕ್ಕಳಿಗೆ ಗಂಡನೊಂದಿಗೆ ಹೊಂದಿಕೊಂಡು ಸುಂದರವಾಗಿ ಸಂಸಾರ ಮಾಡುವಂತೆ ಬುದ್ಧಿವಾದ ಹೇಳುತ್ತಿದ್ದೆ. ಇದಕ್ಕೆ ಪತ್ನಿ ಭಾರತಿ ಜಗಳವಾಡುತ್ತಿದ್ದರು ಎಂದಿರುವ ಅವರು, ಆಸ್ತಿ, ಹಣ ಎಲ್ಲವನ್ನು ಹೆಂಡತಿ ಹಾಗೂ ಮಗನಿಗೆ ನೀಡಿಬಿಟ್ಟಿದ್ದೆ. ನನಗೆ ಹಣ ಬೇಕಾದಾಗ ಅವರನ್ನೇ ಕೇಳಿ ಪಡೆಯಬೇಕಾಗಿತ್ತು ಎಂದು ಶಂಕರ್ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News