ಲಂಚ ಸ್ವೀಕಾರ ಆರೋಪ: ಮಡಿಕೇರಿ ಪಂಚಾಯತ್ ರಾಜ್ ಇಲಾಖೆ ಇಇ ಸೇರಿ ಐವರು ಎಸಿಬಿ ವಶಕ್ಕೆ

Update: 2021-09-18 16:41 GMT

ಮಡಿಕೇರಿ ಸೆ.18 : ರಸ್ತೆ ಮತ್ತು ಮೋರಿ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಂದ ಲಕ್ಷಾಂತರ ರೂ. ಲಂಚ ಸ್ವೀಕರಿಸಿದ ಆರೋಪದಲ್ಲಿ ಪಂಚಾಯತ್ ರಾಜ್ ಇಂಜಿನಿಯರ್ ಇಲಾಖೆಯ ಕಾರ್ಯಪಾಲಕ ಅಭಿಯಂತರರ ಮಡಿಕೇರಿ ಕಚೇರಿಯ ಇ.ಇ. ಶ್ರೀಕಂಠಯ್ಯ ಸೇರಿ ಐವರನ್ನು ಭ್ರಷ್ಟಾಚಾರ ನಿಗ್ರಹ ದಳ ವಶಕ್ಕೆ ಪಡೆದಿದೆ.

ಕಚೇರಿಯ ಟೆಕ್ನಿಕಲ್ ಅಸಿಸ್ಟೆಂಟ್ ತೌಸಿಫ್, ಕಂಪ್ಯೂಟರ್ ಆಪರೇಟರ್ ಕವನ್, ಎಸ್.ಡಿ.ಎ ರಮೇಶ್ ಹಾಗೂ ಏಜೆಂಟ್ ಸಂತೋಷ್ ಅವರನ್ನು ವಶಕ್ಕೆ ಪಡೆದಿರುವ ಎಸಿಬಿ ವಿಚಾರಣೆಗೊಳಪಡಿಸಿದೆ.  

ಬೇಂಗೂರು ಗ್ರಾಮ ಪಂಚಾಯ್ತಿಯ ಕೊಳಗದಾಳು, ಬಾಡಗ, ಕೊಟ್ಟೂರು ಹಾಗೂ ಬೇಂಗೂರು ಗ್ರಾಮದಲ್ಲಿ ಮಳೆಹಾನಿಯಿಂದ ಹಾಳಾಗಿರುವ 4 ರಸ್ತೆಗಳಲ್ಲಿ 16 ಲಕ್ಷ ರೂ.ಗಳ ಪೀಸ್ ವರ್ಕ್ ಕಾಮಗಾರಿಗೆ ಹಾಗೂ 5 ಮೋರಿಗಳ (ಕಲ್‍ವರ್ಟ್ ಕಾಮಗಾರಿ) ಕೆಲಸಕ್ಕೆ ಒಂದು ಮೋರಿಗೆ ಒಂದೂವರೆ ಲಕ್ಷದಂತೆ 7.50 ಲಕ್ಷ ರೂ. ಗಳು ಸೇರಿ ಒಟ್ಟು 23.50 ರೂಗಳ ಪೀಸ್‍ವರ್ಕ್ ಕಾಮಗಾರಿ ಬಗ್ಗೆ ತಿಳಿದು, ಮಡಿಕೇರಿ ತಾಲ್ಲೂಕು ಕೊಳಗದಾಳು ಗ್ರಾಮದ ಗುತ್ತಿಗೆದಾರರೊಬ್ಬರು ಕಾರ್ಯಪಾಲಕ ಇಂಜಿನಿಯರ್ ಕಚೇರಿಗೆ ಅರ್ಜಿಯನ್ನು ಸಲ್ಲಿಸಿದ್ದರು. ಅಲ್ಲದೆ ಮೂರ್ನಾಡು ಗ್ರಾಮ ಮತ್ತು ಮಡಿಕೇರಿ ನಗರದ ಕಸವಿಲೇವಾರಿ ಘಟಕದ ಒಟ್ಟು 28.5 ಲಕ್ಷ ಕಾಮಗಾರಿಯನ್ನು ಸಹ ಪಡೆದಿದ್ದರು. ಈ ಕಾಮಗಾರಿಗಳ ಬಗ್ಗೆ ವಿಚಾರಿಸಲು ಕಾರ್ಯಪಾಲಕ ಅಭಿಯಂತರರ ಕಚೇರಿಗೆ ಸೆ.16 ರಂದು ಹೋಗಿದ್ದಾಗ ಇ.ಇ. ಶ್ರೀಕಂಠಯ್ಯ, ಕಚೇರಿಯ ಟೆಕ್ನಿಕಲ್ ಅಸಿಸ್ಟೆಂಟ್ ತೌಸಿಫ್ ಹಾಗೂ ಕಂಪ್ಯೂಟರ್ ಆಪರೇಟರ್ ಕವನ್ ಅವರುಗಳು ಕ್ರಮವಾಗಿ 1.92 ಲಕ್ಷ ರೂ., 75 ಸಾವಿರ ರೂ. ಸೇರಿದಂತೆ ಒಟ್ಟು 2.67 ಲಕ್ಷ ರೂ.ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟು, ತೌಸಿಫ್ 14 ಸಾವಿರ ರೂ. ಮುಂಗಡವಾಗಿ ಪಡೆದಿದ್ದರು. ಉಳಿದ 2.53 ರೂ. ಲಂಚದ ಹಣ ನೀಡುವಂತೆ ಒತ್ತಾಯಿಸಿದ್ದರು ಎಂದು ಆರೋಪಿಸಲಾಗಿದೆ.

ಇಂದು ಕಾರ್ಯಾಚರಣೆ ಕೈಗೊಂಡಾಗ ದೂರುದಾರ ಗುತ್ತಿಗೆದಾರರಿಂದ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಇ.ಇ, ಶ್ರೀಕಂಠಯ್ಯ ಅವರು ಎಸ್.ಡಿ.ಎ ರಮೇಶ್ ಮೂಲಕ 1.92 ಲಕ್ಷ ರೂ. ಹಾಗೂ ತೌಸಿಫ್ 75 ಸಾವಿರ ರೂ. ಲಂಚದ ಹಣವನ್ನು ಸ್ವೀಕರಿಸಿ, ಏಜೆಂಟ್ ಸಂತೋಷ್ ಬಳಿ ನೀಡಿರುತ್ತಾರೆ. ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಸಂತೋಷ್ ನನ್ನು ಶೋಧನೆಗೆ ಒಳಪಡಿಸಿದಾಗ ಬ್ಯಾಗ್‍ನಲ್ಲಿ 75 ಸಾವಿರ ರೂ.ಗಳು ಮತ್ತು 1.43 ಲಕ್ಷ ರೂ.ಗಳ ಹೆಚ್ಚುವರಿ ಅಕ್ರಮ ಹಣ ದೊರೆತಿದೆ ಎನ್ನಲಾಗಿದೆ. ಕಂಪ್ಯೂಟರ್ ಆಪರೇಟರ್ ಕವನ್ ಕೂಡ ಅಕ್ರಮದಲ್ಲಿ ಭಾಗಿಯಾಗಿದ್ದಾನೆಂದು ಆರೋಪಿಸಲಾಗಿದೆ. ಲಂಚದ ಹಣ ಸಹಿತ ಐವರನ್ನು ವಶಕ್ಕೆ ಪಡೆಯಲಾಗಿದೆ.

ಕೊಡಗು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News