ಹಿಂದೂ ಧರ್ಮ ಬಿಜೆಪಿ ಮತ್ತು ಪ್ರತಾಪ್ ಸಿಂಹನ ಸ್ವತ್ತಲ್ಲ: ಆರ್. ಧ್ರುವನಾರಾಯಣ್ ತಿರುಗೇಟು

Update: 2021-09-18 17:12 GMT

ಮೈಸೂರು,ಸೆ.18: ಹಿಂದೂ ಧರ್ಮ ಬಿಜೆಪಿ ಮತ್ತು ಸಂಸದ ಪ್ರತಾಪ್ ಸಿಂಹ ಅವರ ಸ್ವತ್ತಲ್ಲ, ಇದು ಎಲ್ಲರಿಗೂ ಸೇರಿದ್ದಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಸಂಸದ ಪ್ರತಾಪ್ ಸಿಂಹ ಅವರಿಗೆ ತಿರುಗೇಟು ನೀಡಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದೂ ಧರ್ಮ ಬಿಜೆಪಿ ಮತ್ತು ಪ್ರತಾಪ್ ಸಿಂಹ ಅವರ ಸ್ವತ್ತಲ್ಲ,  ನಮ್ಮದು ಜಾತ್ಯಾತೀತ ರಾಷ್ಟ್ರ, ನಮ್ಮಲ್ಲಿ ಎಲ್ಲಾ ಭಾಷೆ, ಧರ್ಮ, ಜಾತಿಗೆ ಸೇರಿದವರು ಇದ್ದಾರೆ. ಧರ್ಮಾಧಾರಿತ ರಾಜಕಾರಣ ಮಾಡುವುದನ್ನು ಬಿಟ್ಟು ಜಾತ್ಯಾತೀತ ರಾಜಕಾರಣ ಮಾಡುವುದನ್ನು ಕಲಿಯಲಿ ಎಂದು ತಿರುಗೇಟು ನೀಡಿದರು. 

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕುರಿತು ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆ ಬಾಲಿಷವಾಗಿದೆ. ಸಿದ್ದರಾಮಯ್ಯ ಧರ್ಮಾಧಾರಿತ ರಾಜಕೀಯ ಮಾಡಿಲ್ಲ, ಅವರ ಕಾಲದಲ್ಲಿ ದೇವಾಲಯ ನೆಲಸಮ ಮಾಡುವ ಕೆಲಸ ಮಾಡಲಿಲ್ಲ, ಆದರೆ ಬಿಜೆಪಿಯವರು ದೇವಾಲಯ ನೆಲಸಮ ಮಾಡುವ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಕಿಡಿಕಾರಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಏಕಾಏಕಿ ಆದೇಶ ಮಾಡುವುದಿಲ್ಲ. ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಗಮನಕ್ಕೆ ತಂದು ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಆದೇಶ ಹೊರಡಿಸಿರುತ್ತಾರೆ. ಸರ್ಕಾರದ ಲೋಪ ದೋಷವನ್ನು ಬದಿಗಿಟ್ಟು ಅಧಿಕಾರಿಗಳ ಮೇಲೆ ಸಂಸದ ಪ್ರತಾಪ್ ಸಿಂಹ ಆರೋಪ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಕರ್ತನ ಮೇಲಿನ ಹಲ್ಲೆಗೆ ಖಂಡನೆ: ವರದಿ ಮಾಡಲು ತೆರಳಿದ್ದ ಪತ್ರಕರ್ತನ ಮೇಲೆ ಹಲ್ಲೆ ನಡೆಸಿರುವ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರನ್ನು ಕೂಡಲೇ ಬಂಧಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News