ರಸ್ತೆ ದುರಸ್ತಿಗೆ ನಿರ್ಲಕ್ಷ್ಯ ಆರೋಪ: ತಾಪಂ, ಜಿಪಂ ಚುನಾವಣೆ ಬಹಿಷ್ಕರಿಸಿ ಬ್ಯಾನರ್ ಕಟ್ಟಿದ ಗ್ರಾಮಸ್ಥರು

Update: 2021-09-18 18:04 GMT

ಕಳಸ: ಹದಗೆಟ್ಟ ರಸ್ತೆ ದುರಸ್ತಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ಕಳೆದ ಹನ್ನೆರೆಡು ವರ್ಷಗಳಿಂದ ರಸ್ತೆ ದುರಸ್ತಿಗೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಮುಂಬವರು ತಾಪಂ, ಜಿಪಂ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಹದಗೆಟ್ಟ ರಸ್ತೆಗೆ ಅಡ್ಡಲಾಗಿ ಬ್ಯಾನರ್ ಕಟ್ಟಿ ಆಕ್ರೋಶ ಹೊರಹಾಕಿರುವ ಘಟನೆ ಇಲ್ಲಿಗೆ ಸಮೀಪದ ತಲಗೋಡು ಗ್ರಾಮದಲ್ಲಿ ಶನಿವಾರ ವರದಿಯಾಗಿದೆ.

ಕಳಸ ತಾಲೂಕು ವ್ಯಾಪ್ತಿಯ ತೋಟದೂರು ಗ್ರಾಪಂ ವ್ಯಾಪ್ತಿಯ ತಲಗೋಡು ಗ್ರಾಮದಿಂದ ತೋಟದೂರು ರಸ್ತೆ ಸಂಪರ್ಕದ ಸುಮಾರು 12 ಕಿಮೀ ಉದ್ದದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಈ ಹದಗೆಟ್ಟ ರಸ್ತೆ ಕಳೆದ 12 ವರ್ಷಗಳಿಂದ ದುರಸ್ತಿ ಕಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ರಸ್ತೆ ದುರಸ್ತಿಗೆ ಹಲವಾರು ಬಾರಿ ಪ್ರತಿಭಟನೆ, ಮನವಿ ಮಾಡಿದ್ದರೂ ಸಂಬಂಧಿಸಿದ ಇಲಾಖಾಧಿಕಾರಿಗಳು, ಜನಪ್ರತನಿಧಿಗಳು ಯಾವುದೇ ಕ್ರಮವಹಿಸದ ಪರಿಣಾಮ ಬೇಸತ್ತ ಗ್ರಾಮಸ್ಥರು ಮುಂದಿನ ತಾಪಂ, ಜಿಪಂ ಚುನವಣೆಗಳನ್ನು ಬಹಿಷ್ಕರಿಸಲು ನಿರ್ಧರಿಸಿ ಬ್ಯಾನರ್ ಕಟ್ಟಿದ್ದಾರೆಂದು ತಿಳಿದು ಬಂದಿದೆ.

ತಾಲೂಕಿನ ತೋಟದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಈ ರಸ್ತೆ ತಲಗೋಡು-ತೋಟದೂರು ಮುಖ್ಯ ರಸ್ತೆಯನ್ನು ಸಂಪರ್ಕಿಸುವ ರಸ್ತೆಯಾಗಿದೆ. 12 ಕಿ.ಮೀ ಉದ್ದದ ಈ ರಸ್ತೆ ತಲಗೋಡಿನಿಂದ ಬಾಳೆಕೊಂಡ, ಹಳ್ಳದಾಚೆ, ನೆಲ್ಲಿಕೋಟ ಗ್ರಾಮಗಳ ಮೂಲಕ ತೋಟದೂರು ಮುಖ್ಯ ರಸ್ತೆಗೆ ಸಂಪರ್ಕಿಸುತ್ತದೆ. ಆನೇಕ ವರ್ಷಗಳ ಹಿಂದೆ ಈ ರಸ್ತೆಗೆ ಡಾಂಬರೀಕರಣ ಮಾಡಲಾಗಿದ್ದು, ನಂತರ ಇದುವರೆಗೂ ರಸ್ತೆ ದುರಸ್ತಿ ಕಾಣದ ಹಿನ್ನೆಲೆಯಲ್ಲಿ ಸದ್ಯ ಈ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಮಳೆಗಾಲದಲ್ಲಿ ವಾಹನ, ಪಾದಚಾರಿಗಳ ಸಂಚಾರ ಸಾಧ್ಯವಿಲ್ಲ ಎಂಬಂತಾಗಿದೆ. ಕಿತ್ತು ಹೋಗಿರುವ ಜಲ್ಲಿರಸ್ತೆಯ ಮೂಲ ಸ್ವರೂಪವೇ ಬದಲಾಗಿದೆ. ಸುಮಾರು 100ಕ್ಕೂ ಹೆಚ್ಚು ಕುಟುಂಬಗಳು ಈ ಭಾಗದ ಗ್ರಾಮಗಳಲ್ಲಿದ್ದು, ನೂರಾರು ಗ್ರಾಮಸ್ಥರು ಇರುವ ಇದೇ ರಸ್ತೆಯ ಮೂಲಕ ಹೊರ ಜಗತ್ತಿನ ಸಂಪರ್ಕಕ್ಕೆ ಬರಬೇಕಿದೆ. ಮಳೆಗಾಲದಲ್ಲಿ ಈ ರಸ್ತೆ ಹೊಳೆಯನ್ನು ನೆನೆಪಿಸುತ್ತದೆ. ಶಾಲಾ ಕಾಲೇಜು ಮಕ್ಕಳು ಗುಂಡಿ ಗೊಟರುಗಳಿಂದ ಕೆಸರುಮಯವಾಗಿರುವ ಈ ರಸ್ತೆಯಲ್ಲಿ ಅನಿವಾರ್ಯವಾಗಿ ಪ್ರಯಾಣ ಬೆಳೆಸಬೇಕಾಗಿದೆ. ರಸ್ತೆಯ ಪರಿಸ್ಥಿಯನ್ನು ಗಮನಿಸಿ ಯಾವುದೇ ಬಾಡಿಗೆ ವಾಹನಗಳು ಈ ರಸ್ತೆಗೆ ಬರಲು ಒಪ್ಪುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಈ ರಸ್ತೆಯ ದುರಸ್ತಿಗಾಗಿ ಅನೇಕ ವರ್ಷಗಳಿಂದ ಗ್ರಾಮಸ್ಥರು ಜನ ಶಕ್ತಿ ಗ್ರಾಮ ವಿಕಾಸ ಸಮಿತಿಯನ್ನು ಹುಟ್ಟು ಹಾಕಿ ಊರಿನ ರಸ್ತೆಗಾಗಿ ಪಕ್ಷಾತೀತವಾಗಿ ಹೋರಟ ಮಾಡಿದರೂ ಕೂಡ ಫಲ ಕಂಡಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತ್ತು ಸಮಿತಿಯ ಸದಸ್ಯರು ಮುಂದಿನ ಚುನಾವಣೆಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಎಂದು ಸ್ಥಳೀಯರು ತಿಳಿಸಿದ್ದಾರೆ.

ಹಲವಾರು ವರ್ಷಗಳಿಂದ ಹೋರಾಟದ ಮುಖಂತರ ಈ ರಸ್ತೆಯ ದುರಸ್ತಿಗೆ ಅಧಿಕಾರಿಗಳು,ಜನಪ್ರತಿನಿದಿಗಳ ಬಳಿ ಅಂಗಲಾಚಿ ಬೇಡಿಕೊಂಡರೂ ರಸ್ತೆಯ ಪರಿಸ್ಥಿತಿ ಸರಿ ಆಗಲಿಲ್ಲ. ಹದಗೆಟ್ಟ ರಸ್ತೆಯಿಂದಾಗಿ ಗ್ರಾಮಸ್ಥರು ಭಾರೀ ತೊಂದರೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು, ಜನಪ್ರತನಿಧಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ನಾವು ಈ ಬಾರಿ ಚುನಾವಣೆ ಬಹಿಷ್ಕಾರ ಮಾಡುತ್ತಿದ್ದೇವೆ.
-ಮಂಜುನಾಥ, ಕಾರ್ಯದರ್ಶಿ, ಜನಶಕ್ತಿ ಗ್ರಾಮ ವಿಕಾಸ ಸಮಿತಿ, ತಲಗೋಡು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News