ಮಹಿಳೆಯರ ಸುರಕ್ಷೆಗಾಗಿ ವಿಶೇಷ ಕಾನೂನು ಜಾರಿಗೆ ತರುವಂತೆ ವೆಲ್ಫೇರ್ ಪಾರ್ಟಿ ಆಗ್ರಹ

Update: 2021-09-18 18:17 GMT

ಕೊಪ್ಪಳ, ಸೆ.18: ದೇಶದ ಮಹಿಳೆಯರ ಸುರಕ್ಷತೆಗಾಗಿ ವಿಶೇಷ ಕಾನೂನು ಜಾರಿಯಾಗಬೇಕು ಎನ್ನುವ ಅಭಿಯಾನದ ಮೂಲಕ ಸರಕಾರ ಮಹಿಳಾ ಸುರಕ್ಷತೆಯ ಬಗ್ಗೆ ತನ್ನ ಹೊಣೆಗಾರಿಕೆ ಅರಿತು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳದಲ್ಲಿ ಶನಿವಾರ ಬೃಹತ್ ಅಭಿಯಾನ ಆಯೋಜಿಸಿತ್ತು.

ಸರಕಾರಿ ಅಂಕಿ-ಅಂಶಗಳ ಪ್ರಕಾರ ಮಹಿಳೆಯರ ಮೇಲೆ ಲೈಂಗಿಕ ಅತ್ಯಾಚಾರ ಕೇವಲ ಒಂದು ವರ್ಷದಲ್ಲಿ ಶೇ.43ರಷ್ಟು ಹೆಚ್ಚಳ ಆಗಿದೆ. ಕಳೆದ ವರ್ಷ ಜೂನ್‍ನಲ್ಲಿ 580 ಪ್ರಕರಣಗಳು ದಾಖಲಾದರೆ, ಈ ವರ್ಷ 833 ಪ್ರಕರಣಗಳು ದಾಖಲಾಗಿವೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಹಿಂಸೆ ಪ್ರಕರಣಗಳು ಶೇ.39ರಷ್ಟು ಹೆಚ್ಚಾಗಿವೆ. ಅಪಹರಣದ ಪ್ರಕರಣಗಳು ಕಳೆದ ವರ್ಷ 1026 ಇದ್ದದ್ದು ಈ ವರ್ಷ 1580ಕ್ಕೆ ಏರಿಕೆಯಾಗಿವೆ. ವರದಕ್ಷಣೆ ಕಿರುಕುಳ ಮತ್ತು ಸಾವಿನ ಪ್ರಕರಣಗಳು ಕೂಡ ಹೆಚ್ಚಿವೆ. 2020ಕ್ಕೆ ಹೋಲಿಸಿದರೆ 2021ರ ಮೊದಲ ಆರು ತಿಂಗಳಲ್ಲಿ ದಿಲ್ಲಿಯಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ಪ್ರಕರಣಗಳು ಶೇ.63.3ರಷ್ಟು ಹೆಚ್ಚಾಗಿವೆ ಎಂದು ದಿಲ್ಲಿ ಪೊಲೀಸರು ಹಂಚಿಕೊಂಡ ಅಂಕಿ ಅಂಶಗಳು ತೋರಿಸಿವೆ ಎಂದು ಅವರು ಕಿಡಿಗಾರಿದರು.

ದೇಶದ ಮಹಿಳೆಯರು ಭಯದ ವಾತಾವರಣದಲ್ಲಿ ಜೀವನ ಕಳೆಯಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ, ಶಾಲಾ ಕಾಲೇಜು ಪರಿಸರದಲ್ಲಿ, ಕೆಲಸದ ಜಾಗದಲ್ಲಿ   ಲೈಂಗಿಕ ದೌರ್ಜನ್ಯ, ಕೊಲೆ, ಅತ್ಯಾಚಾರ, ಲೈಂಗಿಕ ಟೀಕೆ ಪ್ರಕರಣಗಳು ಹೆಚ್ಚುತ್ತಿವೆ. ಮಗಳು ಶಾಲಾ ಕಾಲೇಜಿಗೆ ಹೋಗಿ ಮನೆಗೆ ಬಂದು ತಲಪುವತನಕ ಭಯದಿಂದಲೇ ಬದುಕುವ ವಾತಾವರಣ ನಿರ್ಮಾಣಗೊಂಡಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇತ್ತ ಕರ್ನಾಟಕ ರಾಜ್ಯದಲ್ಲೂ ಪರಿಸ್ಥಿತಿ ವಿಭಿನ್ನವಾಗಿಲ್ಲ. ಮೈಸೂರಿನಲ್ಲಿ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಅಷ್ಟೇ ಅಲ್ಲ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಅತ್ಯಾಚಾರ ಪ್ರಕರಣಗಳು ಜಾಸ್ತಿಯಾಗ್ತಿವೆ. ರಾಜ್ಯದಲ್ಲಿ ಕೇವಲ 7 ತಿಂಗಳಲ್ಲಿ 305 ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಿದೆ. ಅಂದರೆ ಪ್ರತಿ ತಿಂಗಳಿಗೆ 44 ಪ್ರಕರಣಗಳು ದಾಖಲಾಗುತ್ತಿವೆ. ಇಷ್ಟೆಲ್ಲಾ ಆದರು ರಾಜ್ಯ ಸರಕಾರ ಮಾತ್ರ ದೃತರಾಷ್ಟ್ರನಂತೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಆಡಳಿತ ನಡೆಸುತ್ತಿದೆ ಎಂದು ಅವರು ಟೀಕಿಸಿದರು.

ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರೊಂದಿಗೆ ಸಮಾಲೋಚನೆ ಸೇರಿದಂತೆ ವಿವಿಧ ರೀತಿಯ ನೆರವು ನೀಡುವ ಸಾಂತ್ವನ ಕೇಂದ್ರಗಳನ್ನು ಆರ್ಥಿಕ ಕೊರತೆಯ ನೆಪವೊಡ್ಡಿ ಸ್ಥಗಿತಗೊಳಿಸಲು ಹೊರಟಿರುವ ರಾಜ್ಯ ಸರಕಾರದ ಮಹಿಳಾ ವಿರೋಧಿ ಕ್ರಮವು ಖಂಡನಿಯ ಎಂದು ಪ್ರತಿಭಟನಾಕಾರರು ಹೇಳಿದರು. 

ಈ ಪ್ರತಿಭಟನೆಯಲ್ಲಿ ಕೊಪ್ಪಳ ನಗರಸಭೆ ಸದಸ್ಯೆ ಸಬಿಹಾ ಪಟೇಲ್, ವಿಸ್ತಾರ ಸಂಸ್ಥೆಯ ಆಶಾ, ವಿದ್ಯಾ ಮುದ್ದಾಬಳ್ಳಿ, ರೇಷ್ಮಾ, ಶಿಕ್ಷಕಿ ಜಯಶ್ರಿ, ಸಾಹಿತಿ ಪುಷ್ಪಲತಾ ವಿಳ್ವಾವಿ, ಇಮಾತೆ ಇಸ್ಲಾಮಿ ಹಿಂದ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಹುಮೇರಾ ಫಾರೂಕ್, ವೆಲ್ಫೇರ್ ಪಾರ್ಟಿ ಕಾರ್ಯಕರ್ತೆ ಲುತ್ಫಿ ಮೈಮುನ್ ಹಾಗೂ ಝೈನಬ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News