ಸೆ. 24 ರಂದು ಅಂಗನವಾಡಿ ಕಾರ್ಯಕರ್ತೆಯರ ಮುಷ್ಕರ

Update: 2021-09-18 18:18 GMT

ಬೆಂಗಳೂರು, ಸೆ.18: ಎಐಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಶನ್ ವತಿಯಿಂದ ಇದೇ ಸೆ. 24 ರಂದು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ದೇಶಾದ್ಯಂತ ಮುಷ್ಕರಕ್ಕೆ ಕರೆ ಕೊಡಲಾಗಿದೆ ಎಂದು ಫೆಡರೇಶನ್‍ನ ಅಧ್ಯಕ್ಷ ಎನ್.ಶಿವಣ್ಣ ಅವರು ತಿಳಿಸಿದರು.

ಬೆಂಗಳೂರು ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಮುಂಚೂಣಿ ಕಾರ್ಯಕರ್ತರಾಗಿದ್ದು, ಸರಕಾರವು ಅವರ ಬೇಡಿಕೆಗಳನ್ನು ಪರಿಗಣಿಸುತ್ತಿಲ್ಲ. ಕಳೆದ 45 ವರ್ಷಗಳಿಂದ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಸೌಲಭ್ಯ ನೀಡುತ್ತಿರುವ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರಿಗೆ ನಿವೃತ್ತಿವೇತನವನ್ನಾಗಲಿ, ವೈದ್ಯಕೀಯ ಸೌಲಭ್ಯವನ್ನಾಗಲಿ ಸರಿಯಾಗಿ ನೀಡುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಸೇವಾ ಹಿರಿತನದ ಆಧಾರದಲ್ಲಿ ಅವರ ಗೌರವಧನವನ್ನು ಹೆಚ್ಚಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಅನ್ವಯವಾಗುವಂತಹ ಯೋಜನೆಗಳನ್ನು ಸರಿಯಾಗಿ ಜಾರಿಗೆ ತರಬೇಕು. 2015ರಿಂದ ಈಚೆಗೆ ನಿವೃತ್ತರಾದವರಿಗೆ ಇಡಿಗಂಟು ಹಣವನ್ನು ಬಿಡುಗಡೆ ಮಾಡದೆ ಸರಕಾರ ಸತಾಯಿಸುತ್ತಿದೆ. ಅದನ್ನು ತುರ್ತಾಗಿ ಬಿಡುಗಡೆಗೊಳಿಸಬೇಕು. ಅಂಗನವಾಡಿ ಕೇಂದ್ರಗಳಿಗೆ ಕಳಪೆ ಗುಣಮಟ್ಟದ ಆಹಾರ ಸರಬರಾಜು ಮಾಡುತ್ತಿರುವುದನ್ನು ನಿಲ್ಲಿಸಬೇಕು. ಇವರಿಗೆ ವೇತನ ಸಹಿತ ವೈದ್ಯಕೀಯ ರಜೆಗಳನ್ನು ನೀಡಿ ಎಂದು ಸರಕಾರದ ಮುಂದೆ ತಮ್ಮ ಬೇಡಿಕೆಯನ್ನಿಟ್ಟರು.

ಸಚಿವರ ಬಳಿ ಈ ಬೇಡಿಕೆಗಳ ಈಡೇರಿಕೆಗೆ ಕುರಿತು ಮನವಿ ಮಾಡಿದಾಗ ಅವರು ಕೇವಲ ಕಾನೂನು ಮೂಲಕ ಕ್ರಮ ಕೈಗೊಳ್ಳಲಾಗುವುದೆಂದು ಅಸಡ್ಡೆ ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಹಕ್ಕುಗಳನ್ನು ಪಡೆಯಲು ಮುಷ್ಕರ ನಡೆಸಲಾಗುತ್ತಿದೆ ಎಂದು ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಗೋಷ್ಠಿಯಲ್ಲಿ ಫೆಡರೇಶನ್‍ನ ಪ್ರಧಾನ ಕಾರ್ಯದರ್ಶಿಗಳಾದ ಎಂ.ಜಯಮ್ಮ, ಸದಸ್ಯರಾದ ಗಿರಿಜಾ, ಧನಲಕ್ಷ್ಮಿ, ಉಮಾ, ಸಾವಿತ್ರಮ್ಮ ಸೇರಿದಂತೆ ಮತ್ತಿತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News