ಪ್ರತಿಪಕ್ಷಗಳನ್ನು ಹಗುರವಾಗಿ ತೆಗೆದುಕೊಳ್ಳುವ ಪ್ರಯತ್ನ ಬೇಡ: ಮಾಜಿ ಸಿಎಂ ಬಿಎಸ್ ವೈ

Update: 2021-09-19 13:37 GMT
ಬಿ.ಎಸ್. ಯಡಿಯೂರಪ್ಪ

ದಾವಣಗೆರೆ : 'ಪ್ರತಿಪಕ್ಷಗಳನ್ನು ಹಗುರವಾಗಿ ತೆಗೆದುಕೊಳ್ಳುವ ಪ್ರಯತ್ನ ಮಾಡಬೇಡಿ. ಅವರದೇ ಆದ ಲೆಕ್ಕಾಚಾರ ಶಕ್ತಿ ಅವರಿಗಿದೆ. ಬರುವ ದಿನಗಳಲ್ಲಿ ಒಂದು ತಿಂಗಳ ಕಾಲ ರಾಜ್ಯ ಪ್ರವಾಸ ಮಾಡಿ ಪಕ್ಷವನ್ನು ಬಲಪಡಿಸಬೇಕಿದೆ. ಮುಂದಿನ ವರ್ಷ ಚುನಾವಣೆ ವರ್ಷ, ಒಂದಲ್ಲ ಒಂದು ಚುನಾವಣೆ ಬರುತ್ತಿವೆ.ಆಗ ಶಕ್ತಿ ಮೀರಿ ಪ್ರಾಮಾಣಿಕ ಪ್ರಯತ್ನ ಮಾಡಿ ಗೆಲ್ಲಬೇಕಿದೆ' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. 

ನಗರದ ತ್ರಿಶೂಲ್ ಕಲಾಭವನದಲ್ಲಿ ರವಿವಾರ ಬಿಜೆಪಿ ಕಾರ್ಯಕಾರಣಿ ಸಭೆಯ ಉದ್ಘಾಟನೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಬಿಜೆಪಿಯ ಅನೇಕ ಮುಖಂಡರನ್ನು ಕಾಂಗ್ರೆಸ್‍ವನರು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಅವಕಾಶ ಕೊಡದ ರೀತಿಯಲ್ಲಿ ಆತ್ಮ ವಿಶ್ವಾಸದಿಂದ ಪಕ್ಷವನ್ನು ಸದೃಢ ಕಟ್ಟಬೇಕಿದೆ. ಈ ನಿಟ್ಟನಲ್ಲಿ ಕಾರ್ಯಕರ್ತರು ಸಂಘಟಿತರಾಗುವು ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 140 ಸ್ಥಾನ ಗೆಲ್ಲಿಸಲು ಈಗಿನಿಂದಲೇ ಸನ್ನದ್ಧರಾಗಬೇಕು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.  

''ಬರುವ ದಿನಗಳಲ್ಲಿ 25 ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.ಇಷ್ಟೇ ಅಲ್ಲದೇ ಜಿ.ಪಂ ತಾ.ಪಂ ಚುನಾವಣೆ, 2 ವಿಧಾನಸಭಾ ಉಪ ಚುನಾವಣೆಗಳನ್ನು ಯಶಸ್ವಿಯಾಗಿ ನಿಭಾಯಿಸಿದಾಗ ಮಾತ್ರ ಕಾರ್ಯಕಾರಿಣಿ ಮಾಡಿದ್ದು ಸಾರ್ಥಕವಾಗುತ್ತದೆ. ಯಾವುದೋ ಭ್ರಮೆಯಲ್ಲಿ ಚುನಾವಣೆ ಎದುರಿಸುವುದು ಬೇಡ. ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಲೋಕಸಭೆ ಚುನಾವಣೆ ಗೆಲ್ಲುವುದು ಬಹಳ ಸುಲಭ. ಆದರೆ ರಾಜ್ಯದಲ್ಲಿ ಕೇವಲ ನರೇಂದ್ರ ಮೋದಿ ಅವರ ಹೆಸರು ಹೇಳಿಕೊಂಡು ಚುನಾವಣೆ ಗೆಲ್ಲುತ್ತೇವೆ ಎಂದು ಹೇಳಿಕೊಳ್ಳದೆ  ನಮ್ಮ ಕೆಲಸ ಕಾರ್ಯಗಳ ಮೂಲಕ ರಾಜ್ಯಮಟ್ಟದಲ್ಲಿ ಚುನಾವಣೆ ಗೆಲ್ಲಬೇಕಿದೆ. ಹಾನಗಲ್ ಮತ್ತು ಸಿಂಧಗಿ ಉಪಚುನಾವಣೆಗಳು ನಮಗೆ ಅಗ್ನಿ ಪರೀಕ್ಷೆ. ಇವುಗಳನ್ನು ಗೆಲ್ಲುವ ಅಗತ್ಯವಿದೆ'' ಎಂದರು. 

'ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗದ ಮುಖಂಂಡರನ್ನು ಪಕ್ಷಕ್ಕೆ ಕರೆತರುವ ಮೂಲಕ ಆ ಸಂಘಟನೆಯನ್ನು ಬಲಪಡಿಸುವ ಮೂಲಕ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಹೆಜ್ಜೆ ಇಡಬೇಕಿದೆ. ಪ್ರತಿಯೊಂದು ಬೂತ್‍ಗಳಲ್ಲೂ 25 ಮಹಿಳೆಯರು ತಂಡ ನಮ್ಮ ಜೊತೆ ಗಟ್ಟಿಯಾಗಿ ನಿಲ್ಲುವಂತೆ ಅದೇ ರೀತಿ ಯುವ ಮೋರ್ಚಾದ ತಂಡ ಕೂಡ ನಮ್ಮ ಜೊತೆ ಇರುವಂತೆ ನೋಡಿಕೊಂಡಾಗ ಮಾತ್ರ ನಮ್ಮ ಗುರಿ ತಲುಪಲು ಸಾಧ್ಯವಾಗುತ್ತದೆ' ಎಂದರು. 

''ನನ್ನ ರಾಜ್ಯ ಪ್ರವಾಸದ ಬಗ್ಗೆ ಚರ್ಚೆಗಳಾಗುತ್ತಿವೆ. ನಾನು ಒಬ್ಬನೇ ಪ್ರವಾಸ ಹೋಗಲು ಸಾಧ್ಯವೇ ? ಎಂದು ಪ್ರಶ್ನಿಸಿದ ಅವರು, ನಾನು ಹೋದಾಗ ಆ ಕ್ಷೇತ್ರದ ಶಾಸಕರು, ಸಂಸದರು, ಕಾರ್ಯಕರ್ತರು ಸಹಜವಾಗಿಯೇ ನಮ್ಮ ಜೊತೆ ಇರುತ್ತಾರೆ. ನಾವೆಲ್ಲ ಒಟ್ಟಾಗಿ ಪ್ರವಾಸ ಮಾಡಬೇಕೆ ಹೊರತು, ಯಡಿಯೂರಪ್ಪ ಒಬ್ಬರೇ ಹೋಗುವ ಪರಿಸ್ಥಿತಿ ಬಂದಿಲ್ಲ. ಎಲ್ಲರೂ ಒಟ್ಟಾಗಿ ಹೋಗಿ ಸಂಘಟನೆಯನ್ನು ಬಲಪಡಿಸುವ ಕೆಲಸವನ್ನು ಮಾಡುತ್ತೇವೆ'' ಎಂದರು. 

''ಲೋಕಸಭೆ ಚುನಾವಣೆ ನಮಗೆ ಕಷ್ಟ ಆಗುವುದಿಲ್ಲ. ಮತ್ತೊಮ್ಮೆ ನಿಶ್ಚಿತವಾಗಿ ಬಹುಮತ ಪಡೆಯುತ್ತೇವೆ, ಈ ದೇಶಕ್ಕೆ ಮೋದಿಯವರೆ ಮತ್ತೆ ಪ್ರಧಾನಿಯಾಗಬೇಕೆಂಬ ಅಪೇಕ್ಷೆ ಬಹಳ ಜನಕ್ಕೆ ಇದೆ. ಅದು ನೂರಕ್ಕೆ ನೂರು ಕಾರ್ಯರೂಪಕ್ಕೆ ಬರುವ ವಿಶ್ವಾಸ ನನಗಿದೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸ್ವಲ್ಪ ಎದ್ದು ಕೂತಿರುವುದರಿಂದ ನಾವೂ ಕೂಡ ಅಷ್ಟೇ ಪ್ರಬಲವಾಗಿ ಹೆಜ್ಜೆ ಇಡಬೇಕಿದೆ. ಸಂಘಟನೆಯನ್ನು ಬಲಪಡಿಸಬೇಕಿದೆ. ಮೊನ್ನೆ ನಡೆದ ಸ್ಥಳಿಯ ಸಂಸ್ಥೆಗಳ ಚುನಾವಣೆಗಳಲ್ಲಿ ಗುಲ್ಬರ್ಗಾ, ಹುಬ್ಬಳ್ಳಿಮ ಧಾರವಾಡ ಮಹಾನಗರ ಪಾಲಿಕೆಗಳಲ್ಲಿಯಶಸ್ಸು ಕಂಡಿದ್ದೇವೆ.  ಆದರೆ ರಾಜ್ಯದಲ್ಲಿ ಶ್ರಮಹಾಕಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಪ್ರಯತ್ನ ಮಾಡಬೇಕಿದೆ'' ಎಂದು ಕರೆ ನೀಡಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News