ದೇಶದಲ್ಲಿ 70 ವರ್ಷ ಆಡಳಿದ ನಡೆಸಿದ ಕಾಂಗ್ರೆಸ್ ಸಾಧನೆ ಏನು: ಮುಖ್ಯಮಂತ್ರಿ ಬೊಮ್ಮಾಯಿ ಪ್ರಶ್ನೆ

Update: 2021-09-19 14:13 GMT

ದಾವಣಗೆರೆ, ಸೆ.19 : ದೇಶದಲ್ಲಿ 70 ವರ್ಷ ಆಡಳಿದ ಮಾಡಿದ ಕಾಂಗ್ರೆಸ್ ಪಕ್ಷದ ಸಾಧನೆ ಏನು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.

ನಗರದಲ್ಲಿ ರವಿವಾರ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರ ಕಾಂಗ್ರೆಸ್ಸನ್ನು ವಿಸರ್ಜಿಸಲು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸೂಚಿಸಿದ್ದರು. ಆದರೆ, ಗಾಂಧೀಜಿಯನ್ನು ತೋರಿಕೆಗಾಗಿ ತತ್ವ ಪುರುಷ ಮಾಡಿಕೊಂಡಿದ್ದ ಕಾಂಗ್ರೆಸ್‍ನವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಗಾಂಧೀಜಿಯಿಂದ ಗಾಂಧಿಗೆ ಬದಲಾದರು. ಪ್ರಜಾಪ್ರಭುತ್ವಕ್ಕೆ ತಿಲಾಂಜಲಿ ಇಟ್ಟು, ಸರ್ವಾಧಿಕಾರಿ ಧೋರಣೆ ಒಪ್ಪಿಕೊಂಡ ಗಾಂಧಿಗಳ ನೇತೃತ್ವದ ಕಾಂಗ್ರೆಸ್ ಪಕ್ಷ ದ್ವಂದ್ವಗಳಿಂದಲೇ ಕೂಡಿದೆ ಎಂದು ಅವರು ಟೀಕಿಸಿದರು.

ಬೇರೆ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಹಿಸಿಕೊಳ್ಳುವ ಮನಸ್ಥಿತಿ ಕಾಂಗ್ರೆಸ್ಸಿಗೆ ಇಲ್ಲ. ವಾಮಮಾರ್ಗದಲ್ಲಿ, ಕುಟಿಲ ನೀತಿಯಿಂದ ಕಾಂಗ್ರೆಸ್ಸೇತರ ಸರ್ಕಾರ ಯಾವುದೇ ಇದ್ದರೂ ಅದು ಯಶಸ್ವಿಯಾಗದಂತೆ ತಡೆಯುತ್ತಾ ಬಂದಿದೆ. ಬಹುಸಂಖ್ಯಾತರ ಕಡೆಗಣಿಸಿ, ತುಷ್ಟೀಕರಣ ನೀತಿಯನ್ನೇ ಅನುಸರಿಸಿಕೊಂಡು ಬಂದ ಕಾಂಗ್ರೆಸ್ಸೇ ಬಂಡವಾಳ ಶಾಹಿಗಳನ್ನು ಪ್ರೋತ್ಸಾಹಿಸಿತು. ಬಹುಸಂಖ್ಯಾತರ ಭಾವನೆಗಳಿಗೆ ಧ್ವನಿಯಾಗಲು, ತುಷ್ಟೀಕರಣದ ವಿರುದ್ಧ ಹೋರಾಡಲೆಂದೇ ಹುಟ್ಟಿಕೊಂಡ ಬಿಜೆಪಿ ಇಂದು ದೇಶವಷ್ಟೇ ಅಲ್ಲ, ವಿಶ್ವದಲ್ಲೇ ಅತೀ ದೊಡ್ಡ ರಾಜಕೀಯ ಪಕ್ಷವಾಗಿ ನಿಂತಿದೆ ಎಂದು ಅವರು ತಿಳಿಸಿದರು.

ಕೇಂದ್ರ, ರಾಜ್ಯದಲ್ಲಿ ವಿಪಕ್ಷ ದುರ್ಬಲವಾಗಿದೆ. ದೇಶವನ್ನು ಮುನ್ನಡೆಸುವ ಜವಾಬ್ಧಾರಿ ಬಿಜೆಪಿ ಮೇಲಿದೆ. ಯಾವೊಬ್ಬ ಪ್ರಧಾನಿಯೂ ಸಾಮಾನ್ಯ ವಿಚಾರಗಳ ಬಗ್ಗೆ ಮಾತನಾಡಿರಲಿಲ್ಲ. ಆದರೆ, ನರೇಂದ್ರ ಮೋದಿ ಸ್ವಚ್ಛತೆ ಬಗ್ಗೆ ಮಾತನಾಡಿದರು. ಹಿಂದೆ ಲಾಲ ಬಹಾದ್ದೂರ್ ಶಾಸ್ತ್ರಿ ವಾರದಲ್ಲಿ ಒಂದು ಹೊತ್ತಿನ ಊಟ ಬಿಡಲು ಮನವಿ ಮಾಡಿದ್ದರು.

ಕೃಷಿ ಸಮ್ಮಾನ್, ಪಿಎಂ ಆವಾಸ್, ಆಯುಷ್ಮಾನ್ ಭಾರತ್ ಹೀಗೆ ಹಲವಾರು ಯೋಜನೆ ಜನರಿಗೆ ವರವಾಗಿದೆ ಎಂದು ಅವರು ವಿವರಿಸಿದರು.

ರೈತರ ಆದಾಯ ದ್ವಿಗುಣ ಎಂಬುದಾಗಿ ಹೇಳಲು ಧೈರ್ಯ ಬೇಕು. ಆ ಮಾತು ಹೇಳಿ ಅನುಷ್ಟಾನಕ್ಕೆ ತಂದ ಶ್ರೇಯ ಮೋದಿಯವರಿಗೆ ಸಲ್ಲುತ್ತದೆ. ಈಗಿನ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರಲು ಸಂಕಲ್ಪ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News