ಕಲಬುರಗಿಯಲ್ಲಿ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಆಯೋಜನೆ: ಶಿವಾನಂದ ತಗಡೂರು

Update: 2021-09-19 15:10 GMT
ಶಿವಾನಂದ ತಗಡೂರು 

ಕಲಬುರಗಿ, ಸೆ.19: ಇಪ್ಪತ್ತೈದು ವರ್ಷಗಳ ಬಳಿಕ ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ ಕರ್ನಾಟಕ ರಾಜ್ಯ 36ನೆ ಪತ್ರಕರ್ತರ ಸಮ್ಮೇಳನ ನಡೆಸಲು ಸಿದ್ಧತೆಗಳನ್ನು ಆರಂಭಿಸಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.

ರವಿವಾರ ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮ್ಮೇಳನ ಉದ್ಘಾಟನೆ ನೆರವೇರಿಸುವಂತೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದೇವೆ. ವಾರದೊಳಗೆ ದಿನಾಂಕ ನಿಗದಿ ಮಾಡಲಿದ್ದಾರೆ. ನವೆಂಬರ್ ಎರಡನೆ ವಾರದಲ್ಲಿ ಸಮ್ಮೇಳನದ ದಿನಾಂಕ ನಿಗದಿಯಾಗಲಿದೆ ಎಂದರು.

1996ರಲ್ಲಿ ಕಲಬುರಗಿಯಲ್ಲಿ 20ನೆ ರಾಜ್ಯ ಸಮ್ಮೇಳನ ನಡೆದಿತ್ತು. ಆಗಿನ ಕಾಲಕ್ಕೂ ಈಗಿನ ಕಾಲಕ್ಕೂ ಸಾಕಷ್ಟು ಬದಲಾವಣೆಗಳಾಗಿವೆ. ಆಗ ವಿದ್ಯುನ್ಮಾನ ಮಾಧ್ಯಮಗಳು ಕಡಿಮೆ ಇದ್ದವು. ಈಗ ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಈಗ ಬಹು ಸಮ್ಮೇಳನ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಡೆಸಲಾಗುವುದು. ವೃತ್ತಿ ಆಧಾರಿತ ಮೇಲೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಸಮ್ಮೇಳನ ಸಂಘಟಿಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಹಾಗೂ ಶರಣಬಸವೇಶ್ವರರ ಮಹಾದಾಸೋಹಿ ಸಂಸ್ಥಾನದ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಅವರ ಸಾನ್ನಿಧ್ಯದಲ್ಲಿ ಸ್ವಾಗತ ಸಮಿತಿ ರಚಿಸಲಾಗುವುದು ಎಂದು ತಗಡೂರು ವಿವರಿಸಿದರು.

ಕೋವಿಡ್ ಸೋಂಕು ಆತಂಕದ ಹಿನ್ನೆಲೆಯಲ್ಲಿ ಸಮ್ಮೇಳನ ಎರಡು ದಿನದ ಬದಲು ಒಂದು ದಿನ ಮಾತ್ರ ಆಯೋಜಿಸಲು ಉದ್ದೇಶಿಸಲಾಗಿದೆ. ಬೆಳಗ್ಗೆ ಉದ್ಘಾಟನೆ, ತದನಂತರ ಗೋಷ್ಠಿ, ಸಂಜೆ ಸಮಾರೋಪ ನಡೆಸಲು ಉದ್ದೇಶಿಸಲಾಗಿದೆ. ಮರುದಿನ ಪ್ರವಾಸ ಆಯೋಜಿಸಲಾಗುವುದು. ಸಮ್ಮೇಳನ ಅಂಗವಾಗಿ ಅರ್ಥಪೂರ್ಣ ಲೇಖನಗಳನ್ನು ಒಳಗೊಂಡ ಸ್ಮರಣ ಸಂಚಿಕೆ ಹೊರತರಲಾಗುವುದು. ಒಟ್ಟಾರೆ ಸಮ್ಮೇಳನ ಯಶಸ್ವಿಗೆ ವಿವಿಧ ಸಮಿತಿಗಳನ್ನು ರಚಿಸಲಾಗುವುದು ಎಂದು ತಿಳಿಸಿದರು. ಇದೇ ಸಮ್ಮೇಳನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ 19 ವಾರ್ಷಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ ಎಂದರು. 

ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭವಾನಿಸಿಂಗ್ ಠಾಕೂರ್, ಪ್ರಧಾನ ಕಾರ್ಯದರ್ಶಿ ದೇವಿಂದ್ರಪ್ಪ ಅವಂಟಿ, ರಾಜ್ಯ ಸಮಿತಿ ಸದಸ್ಯ ಹಣಮಂತರಾವ ಭೈರಾಮಡಗಿ, ದೇವಿಂದ್ರಪ್ಪ ಕಪನೂರ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News