ಬದ್ಧತೆ ಉಳಿಸಿಕೊಂಡ ರಾಜಕಾರಣಿ ಲಲಿತಾನಾಯಕ್: ಪ್ರೊ.ಎಸ್.ಜಿ.ಸಿದ್ದರಾಮಯ್ಯ

Update: 2021-09-19 15:26 GMT
 ಪ್ರೊ.ಎಸ್.ಜಿ.ಸಿದ್ದರಾಮಯ್ಯ

ಬೆಂಗಳೂರು, ಸೆ. 19: `ಅಧಿಕಾರಕ್ಕಾಗಿ ರಾಜಕಾರಣಿಗಳು ತತ್ವ, ಸಿದ್ಧಾಂತ, ನೈತಿಕತೆ ಬಿಟ್ಟು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹೋಗುತ್ತಿರುವವರ ಮಧ್ಯೆ ಮಾಜಿ ಸಚಿವ ಬಿ.ಟಿ.ಲಲಿತಾನಾಯಕ್ ಅವರು ಪ್ರಗತಿಪರ, ಎಡ ಚಿಂತೆನಗಳನ್ನು ಇಟ್ಟುಕೊಂಡು ಬದ್ಧತೆಯನ್ನು ಉಳಿಸಿಕೊಂಡ ಅಪರೂಪದ ರಾಜಕಾರಣಿ' ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರವಿವಾರ ಸಂಜಯನಗರದ ಶಾಸ್ತ್ರಿ ಮೆಮೋರಿಯಲ್ ಹಾಲ್‍ನಲ್ಲಿ ಮಾಜಿ ಸಚಿವೆ ಹಾಗೂ ಲೇಖಕಿ ಬಿ.ಟಿ.ಲಲಿತಾನಾಯಕ್ ಅವರಿಗೆ 75 ವರ್ಷಗಳಾದ ಹಿನ್ನೆಲೆಯಲ್ಲಿ ಸಾಹಿತಿ ಮತ್ತು ಕಲಾವಿದರ ವೇದಿಕೆಯಿಂದ ಏರ್ಪಡಿಸಿದ್ದ ಕವಿಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, `ಲಲಿತಾನಾಯಕ್ ಅವರು ತಮ್ಮ ಬದ್ಧತೆ ಬಿಟ್ಟು ರಾಜಿ ಮಾಡಿಕೊಂಡಿದ್ದರೆ ವಿವಿಧ ಪಕ್ಷಗಳಿಂದ ಕೆಂಪುಹಾಸಿನ ಸ್ವಾಗತ, ಇನ್ನೂ ದೊಡ್ಡ `ಸ್ಥಾನಮಾನ' ಸಿಗುತ್ತಿತ್ತೇನೋ. ಆದರೆ, ಅವರು ಎಂದೂ ರಾಜಿ ಮಾಡಿಕೊಳ್ಳಲಿಲ್ಲ' ಎಂದು ಹೇಳಿದರು.

ಲಲಿತಾನಾಯಕ್ ಅವರು ರಾಜಕಾರಣಿ ಹಾಗೂ ಸಚಿವೆಯಾಗಿಯೂ ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಕಡಿಮೆ ಓದಿದ್ದರೂ ಅವರು ಲೇಖಕಿಯಾಗಿಯೂ ದೊಡ್ಡ ಸಾಧನೆ ಮಾಡಿದ್ದಾರೆ. ದಲಿತ, ಮಹಿಳೆ, ರೈತರು ಸೇರಿದಂತೆ ಶೋಷಿತ ಸಮುದಾಯದ ಎಲ್ಲ ಹೋರಾಟಗಳಲ್ಲಿಯೂ ಅವರು ತಮ್ಮನ್ನು ಸದಾ ತೊಡಗಿಸಿಕೊಂಡಿದ್ದಾರೆ. ಅವರಿಗೆ 75 ವರ್ಷಗಳಾಗಿದ್ದರೂ ಆರೋಗ್ಯವಾಗಿರುವುದು ಅವರ ನೈತಿಕ ಶಕ್ತಿಯೇ ಸರಿ ಎಂದು ಸಿದ್ದರಾಮಯ್ಯ ತಿಳಿಸಿದರು.

ಲೇಖಕಿಯರಾದ ಡಾ.ವಸುಂಧರಾ ಭೂಪತಿ, ಡಾ.ಕೆ.ಶರೀಫಾ, ರಂಗಭೂಮಿ ಕಲಾವಿದ ಡಾ.ಗೋವಿಂದಸ್ವಾಮಿ, ಲೇಖಕ ಯೋಗೇಶ್ ಮಾಸ್ಟರ್ ಸೇರಿದಂತೆ ಇನ್ನಿತರರು ಕವನ ವಾಚನ ಮಾಡಿದರು. ಲಲಿತಾ ನಾಯಕ್ ಅವರ ಕುಟುಂಬದ ಸದಸ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News