ಅ.1ರಿಂದ ಪಂಚಮಸಾಲಿ ಸಮುದಾಯದಿಂದ ಸತ್ಯಾಗ್ರಹ: ಬಸವಜಯ ಮೃತ್ಯುಂಜಯ ಸ್ವಾಮೀಜಿ

Update: 2021-09-19 16:15 GMT

ಕೊಪ್ಪಳ, ಸೆ.19: ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸಬೇಕು ಎಂದು ಒತ್ತಾಯಿಸಿ ಅ.1ರಿಂದ ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಕೂಡಲಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ರವಿವಾರ ಕೊಪ್ಪಳ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸತ್ಯಾಗ್ರಹ ಆರಂಭಕ್ಕೆ ಪಂಚಮಸಾಲಿ ಸಮುದಾಯ ತೀರ್ಮಾನಿಸಿದೆ. ಅದರ ಒಳಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೀಸಲಾತಿ ಘೋಷಿಸಿದರೆ ಸನ್ಮಾನ, ಇಲ್ಲವಾದರೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾವನದಲ್ಲಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಿಂದ ಇಡೀ ರಾಜ್ಯದ ಪಂಚಮಸಾಲಿ ಸಮುದಾಯ ಒಂದಾಗಿದೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ಮಾಡಲಾಗಿತ್ತು. ಈ ವೇಳೆ ಆಗಿನ ಸಿಎಂ ಬಿಎಸ್‍ವೈ ನೇತೃತ್ವದ ರಾಜ್ಯ ಸರಕಾರ 6 ತಿಂಗಳ ಸಮಯ ಕೇಳಿತ್ತು. ಸರಕಾರ ಕೇಳಿದ್ದ ಸಮಯ ಮೀರಿದ್ದು, ಬೇಡಿಕೆ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಕಾರಣಕ್ಕೆ ಸರಕಾರಕ್ಕೆ ನಮ್ಮ ಬೇಡಿಕೆ ನೆನಪಿಸಲು ಮತ್ತೇ ಅಭಿಯಾನ ಆರಂಭಿಸಲಾಗಿದೆ. ಒಂದು ವೇಳೆ ಈಗಿನ ಸಿಎಂ ಮೀಸಲಾತಿ ಘೋಷಣೆ ಮಾಡದಿದ್ದರೆ ಇಡೀ ಸಮುದಾಯವೇ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿದೆ ಎಂದರು.

ಶ್ರೀಗಳ ಶಾಪದಿಂದಲೇ ಬಿಎಸ್‍ವೈ ಅಧಿಕಾರ ಕಳೆದುಕೊಂಡರು

‘ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡುವೆ ಎಂದಿದ್ದ ಬಿ.ಎಸ್.ಯಡಿಯೂರಪ್ಪ ಕೊನೆಗೂ ಮೀಸಲಾತಿ ಕೊಡಲಿಲ್ಲ. ಬಸವಜಯ ಮೃತ್ಯುಂಜಯ ಶ್ರೀಗಳ ಶಾಪದಿಂದಲೇ ಬಿಎಸ್‍ವೈ ಅಧಿಕಾರ ಕಳೆದುಕೊಂಡರು.’
-ವಿಜಯಾನಂದ ಕಾಶಪ್ಪನವರ್, ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News