ಶಿಕ್ಷಣ ಸಂಸ್ಥೆಗಳಲ್ಲಿ ಹಿಂಬಾಗಿಲ ಪ್ರವೇಶ ನಿಲ್ಲಲಿ: ದಿಲ್ಲಿ ಹೈಕೋರ್ಟ್

Update: 2021-09-19 16:07 GMT

ಹೊಸದಿಲ್ಲಿ, ಸೆ.19: ದೇಶದಲ್ಲಿಯ ಲಕ್ಷಾಂತರ ವಿದ್ಯಾರ್ಥಿಗಳು ಅರ್ಹತೆಯ ಆಧಾರದಲ್ಲಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಕಷ್ಟಪಟ್ಟು ಓದುತ್ತಿದ್ದಾರೆ,ಹೀಗಿರುವಾಗ ವೈದ್ಯಕೀಯ ಕಾಲೇಜುಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳಲ್ಲಿ ಹಿಂಬಾಗಿಲ ಪ್ರವೇಶವನ್ನು ನಿಲ್ಲಿಸುವುದು ಇಂದಿನ ಅಗತ್ಯವಾಗಿದೆ ಎಂದು ದಿಲ್ಲಿ ಉಚ್ಚ ನ್ಯಾಯಾಲಯವು ಹೇಳಿದೆ.

ಭೋಪಾಲದ ಎಲ್.ಎನ್.ಮೆಡಿಕಲ್ ಹಾಸ್ಪಿಟಲ್ ಆ್ಯಂಡ್ ರಿಸರ್ಚ್ ಸೆಂಟರ್ನಲ್ಲಿ 2016ರಲ್ಲಿ ಪ್ರವೇಶವನ್ನು ಗಿಟ್ಟಿಸಿಕೊಂಡಿದ್ದ ಐವರು ವಿದ್ಯಾರ್ಥಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ಸಂದರ್ಭದಲ್ಲಿ ಉಚ್ಚ ನ್ಯಾಯಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ದೇಶದಲ್ಲಿಯ ಎಲ್ಲ ಸರಕಾರಿ ಮತ್ತು ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ನೀಟ್ ಪರೀಕ್ಷೆಯ ಫಲಿತಾಂಶದ ಆಧಾರದಲ್ಲಿ ಕೇಂದ್ರೀಕೃತ ಸಮಾಲೋಚನೆ ವ್ಯವಸ್ಥೆಯ ಮೂಲಕ ಪ್ರವೇಶವನ್ನು ನೀಡುವುದು ಕಡ್ಡಾಯವಾಗಿದೆ. ಆದರೆ ಈ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರೂ ವೈದ್ಯಕೀಯ ಶಿಕ್ಷಣ ಇಲಾಖೆ (ಡಿಎಂಇ) ನಡೆಸಿದ್ದ ಕೇಂದ್ರೀಕೃತ ಸಮಾಲೋಚನೆಗೆ ಹಾಜರಾಗದೇ ಪ್ರವೇಶವನ್ನು ಪಡೆದಿದ್ದರು.
 
ಇದನ್ನು ಗಮನಿಸಿದ್ದ ಭಾರತಿಯ ವೈದ್ಯಕೀಯ ಮಂಡಳಿ (ಎಂಸಿಐ)ಯು ಈ ವಿದ್ಯಾರ್ಥಿಗಳ ಪ್ರವೇಶವನ್ನು ರದ್ದುಗೊಳಿಸಿ 2017 ಎಪ್ರಿಲ್ ನಲ್ಲಿ ಪತ್ರಗಳನ್ನು ಬರೆದಿತ್ತು. ಹಲವಾರು ಪತ್ರಗಳನ್ನು ಬರೆದಿದ್ದರೂ ವಿದ್ಯಾರ್ಥಿಗಳಾಗಲೀ ಮೆಡಿಕಲ್ ಕಾಲೇಜಾಗಲೀ ಅದಕ್ಕೆ ಸ್ಪಂದಿಸಿರಲಿಲ್ಲ. ಕಾಲೇಜು ಅವರನ್ನು ತನ್ನ ವಿದ್ಯಾರ್ಥಿಗಳನ್ನಾಗಿ ಮುಂದುವರಿಸಿತ್ತು ಮತ್ತು ತರಗತಿಗಳಿಗೆ ಹಾಗೂ ಪರೀಕ್ಷೆಗಳಿಗೆ ಹಾಜರಾಗಲು ಅವಕಾಶವನ್ನು ನೀಡಿ,ಮುಂದಿನ ತರಗತಿಗಳಿಗೆ ತೇರ್ಗಡೆಗೊಳಿಸಿತ್ತು.

ಅಂತಿಮವಾಗಿ ತಮಗೆ ಪ್ರವೇಶವನ್ನು ನಿರಾಕರಿಸಿದ್ದ ಎಂಸಿಐ ಆದೇಶವನ್ನು ರದ್ದುಗೊಳಿಸುವಂತೆ ಮತ್ತು ಇತರ ವಿದ್ಯಾರ್ಥಿಗಳಂತೆ ವ್ಯಾಸಂಗವನ್ನು ಮುಂದುವರಿಸಲು ತಮಗೆ ಅನುಮತಿಗೆ ನಿರ್ದೇಶ ಕೋರಿ ಈ ಐವರು ವಿದ್ಯಾರ್ಥಿಗಳು ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದು, ಅದನ್ನು ಏಕ ನ್ಯಾಯಾಧೀಶ ಪೀಠವು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನೂ ನ್ಯಾಯಮೂರ್ತಿಗಳಾದ ವಿಪಿನ್ ಸಾಂಘಿ ಮತ್ತು ಜಸ್ಮೀತ್ ಸಿಂಗ್ ಅವರ ಪೀಠವು ಇದೀಗ ವಜಾಗೊಳಿಸಿದೆ. ಮೇಲ್ಮವಿಯಲ್ಲಿ ಯಾವುದೇ ಹುರುಳಿಲ್ಲ ಎಂದು ಅದು ಹೇಳಿದೆ.

ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಹಿಂಬಾಗಿಲ ಮೂಲಕ ಪ್ರವೇಶವನ್ನು ನೀಡುವುದರಿಂದ ಹೆಚ್ಚಿನ ಅರ್ಹತೆಯನ್ನು ಹೊಂದಿದ್ದರೂ ಇಂತಹ ಹಿಂಬಾಗಿಲ ಪ್ರವೇಶವನ್ನು ಪಡೆಯುವ ವಿದ್ಯಾರ್ಥಿಗಳಿಂದಾಗಿ ಪ್ರವೇಶ ನಿರಾಕರಿಸಲ್ಪಟ್ಟ ವಿದ್ಯಾರ್ಥಿಗಳಿಗೆ ತುಂಬಾ ಅನ್ಯಾಯವಾಗುತ್ತದೆ ಎಂದು ಹೇಳಿರುವ ಉಚ್ಚ ನ್ಯಾಯಾಲಯವು, ತಮ್ಮ ಅಧ್ವಾನ ಸ್ಥಿತಿಗಾಗಿ ಅರ್ಜಿದಾರರು ತಮ್ಮನ್ನೇ ದೂರಿಕೊಳ್ಳಬೇಕು ಎಂದು ಹೇಳಿದೆ.

ಈ ವಿದ್ಯಾರ್ಥಿಗಳು 2017,ಎ.26ರಂದು ಎಂಸಿಐ ಬರೆದಿದ್ದ ಪತ್ರಕ್ಕೆ ಕಿವಿಗೊಟ್ಟಿದ್ದರೆ ಅವರು ತಮ್ಮ ಬದುಕಿನ ನಾಲ್ಕು ವರ್ಷಗಳು ವ್ಯರ್ಥಗೊಳ್ಳುವುದನ್ನು ತಪ್ಪಿಸಬಹುದಿತ್ತು. ಆದರೆ ಅವರು ಬೇಜವಾಬ್ದಾರಿಯಿಂದ ವರ್ತಿಸಿದ್ದರು, ರಿಟ್ ಅರ್ಜಿಯಲ್ಲಿ ತಮ್ಮ ಪರವಾಗಿ ಯಾವುದೇ ಮಧ್ಯಂತರ ಆದೇಶಅಗಳಿರದಿದ್ದರೂ ಅವರು ತರಗತಿಗಳಿಗೆ ಹಾಜರಾಗುವುದನ್ನು ಮುಂದುವರಿಸಿದ್ದರು ಮತ್ತು ತಮಗೆ ತಾವೇ ಹಾನಿಯನ್ನು ಮಾಡಿಕೊಂಡಿದ್ದಾರೆ ಎಂದು ಉಚ್ಚ ನ್ಯಾಯಾಲಯವು ಕುಟುಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News