6ಲಕ್ಷ ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಭೂಮಿ ಇಲಾಖೆಗೆ ವಾಪಸ್: ಸಚಿವ ಆರ್.ಅಶೋಕ್

Update: 2021-09-20 12:49 GMT

ಬೆಂಗಳೂರು, ಸೆ. 20: `ರಾಜ್ಯದಲ್ಲಿನ ಡೀಮ್ಡ್ ಅರಣ್ಯ ಪ್ರದೇಶವೆಂದು ಪರಿಗಣಿಸಿರುವ 9 ಲಕ್ಷ ಹೆಕ್ಟೇರ್ ಭೂಮಿಯ ಪೈಕಿ 6 ಲಕ್ಷ ಹೆಕ್ಟೇರ್ ಪ್ರದೇಶವನ್ನು ಕಂದಾಯ ಇಲಾಖೆಗೆ ವಾಪಸ್ ಕೊಡಲು ಅರಣ್ಯ ಇಲಾಖೆ ಸಮ್ಮತಿಸಿದ್ದು, ಈ ಭೂಮಿಯಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡು, ಸಾಗುವಳಿ ಮಾಡುವವರಿಗೆ ಹಂಚಿಕೆ ಮಾಡಲಾಗುವುದು' ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಸೋಮವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಲಾಲಾಜಿ ಆರ್.ಮೆಂಡನ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, `ಈ ಹಿಂದೆ ಕೆಲ ಜಿಲ್ಲಾಧಿಕಾರಿಗಳು ಜನರ ಬೇಡಿಕೆ ಹಿನ್ನೆಲೆಯಲ್ಲಿ ತಮಗೆ ಇದರ ಹೊಣೆ ಬೇಡ ಎಂದು 9 ಲಕ್ಷ ಹೆಕ್ಟೇರ್ ಕಂದಾಯ ಭೂಮಿಯನ್ನು ಡೀಮ್ಡ್ ಫಾರೆಸ್ಟ್ ಎಂದು ಘೋಷಿಸಿ ಈ ಬಗ್ಗೆ ಸುಪ್ರೀಂಕೋರ್ಟ್‍ಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ.

ಆ ಪೈಕಿ 6 ಲಕ್ಷ ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಪ್ರದೇಶವನ್ನು ಕಂದಾಯ ಇಲಾಖೆಗೆ ವಾಪಸ್ ಪಡೆಯಲು ಅರಣ್ಯ ಸಚಿವರ ಜತೆ ಚರ್ಚೆ ನಡೆಸಿದ್ದು, ಅವರು ಇದಕ್ಕೆ ಸ್ಪಂದಿಸಿದ್ದಾರೆ. ಹೀಗಾಗಿ ಸದ್ಯದಲ್ಲೇ ಈ ಭೂಮಿಯನ್ನು ಹಿಂಪಡೆದು ಸುಪ್ರೀಂಕೋರ್ಟ್‍ಗೆ ಪ್ರಮಾಣ ಪತ್ರ ಸಲ್ಲಿಸಲಾಗುವುದು. ಅಲ್ಲದೆ, ಈ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ಮತ್ತು ಸಾಗುವಳಿ ಮಾಡುವವರಿಗೆ ಜಾಗ ನೀಡಲಾಗುವುದು ಎಂದರು.

ಅವಧಿ ವಿಸ್ತರಣೆ: ಸರಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ವಾಸದ ಮನೆಗಳನ್ನು ನಿರ್ಮಿಸಿರುವವರಿಗೆ ಅದನ್ನು ಸಕ್ರಮಗೊಳಿಸಲು ಭೂಕಂದಾಯ ಕಾಯ್ದೆ 1964ರ ಕಲಂ `94ಸಿ' ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಕೆ ಅವಧಿಯನ್ನು 2021ರ ಮಾರ್ಚ್ 31ರಿಂದ 2022ರ ಮಾಚ್ 31ರ ವರೆಗೆ ಅವಧಿ ವಿಸ್ತರಿಸಲಾಗಿದೆ ಎಂದರು.

ಅಲ್ಲದೆ, ಸ್ವೀಕರಿಸಿದ ಅರ್ಜಿಗಳನ್ನು ಇತ್ಯರ್ಥಪಡಿಸಲು 2023ರ ಮಾರ್ಚ್ 31ರ ವರೆಗೂ ಅವಕಾಶ ಇರುತ್ತದೆ. 30-40 ಅಡಿ, 40-60 ಅಡಿ, 50-80 ಅಡಿ ಅಳತೆಯ ವಾಸದ ಮನೆಗಳನ್ನು ಸಕ್ರಮಗೊಳಿಸಲಾಗುವುದು. ಈ ಅಳತೆಗೂ ಮೀರಿ ಮನೆ ನಿರ್ಮಿಸಿಕೊಂಡಿದ್ದರೆ ಅದನ್ನು ಪರಿಶೀಲಿಸಿ ಸಕ್ರಮಗೊಳಿಸಲು ಸರಕಾರ ಸಿದ್ಧವಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News