ಮುಹಮ್ಮದ್ ಮೀರಾನ್ ಸಾಹೇಬ್ ಹೆಮ್ಮೆಯ ಅನಿವಾಸಿ ಕನ್ನಡಿಗ: ಮುಖ್ಯಮಂತ್ರಿ ಬೊಮ್ಮಾಯಿ

Update: 2021-09-20 13:58 GMT

ಬೆಂಗಳೂರು, ಸೆ.20: ಕೊಲ್ಲಿ ರಾಷ್ಟ್ರಗಳಲ್ಲಿ ಕನ್ನಡ ಉಳಿಸಿ, ಬೆಳೆಸಿ ತಾಯ್ನಾಡಿಗೆ ಅದ್ಭುತ ಕೊಡುಗೆ ನೀಡುತ್ತಿರುವ ಮುಹಮ್ಮದ್ ಮೀರಾನ್ ಸಾಹೇಬ್, ಬಡಕುಟುಂಬಗಳ ಬಾಳು ಬೆಳಗಿದ ಹೆಮ್ಮೆಯ ಅನಿವಾಸಿ ಕನ್ನಡಿಗ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸೋಮವಾರ ವಿಧಾನಸೌಧದಲ್ಲಿರುವ ತಮ್ಮ ಕೊಠಡಿಯಲ್ಲಿ ಮುಹಮ್ಮದ್ ಮೀರಾನ್ ಸಾಹೇಬ್ ಅವರಿಗೆ 2020ನೆ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ ಅವರು, ವಿದೇಶದಲ್ಲಿದ್ದೂ ತಾಯ್ನಾಡಿನ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವುದು ಅಭಿನಂದನಾರ್ಹ ಎಂದರು.

ಸಂಕ್ಷಿಪ್ತ ಪರಿಚಯ: ಉಡುಪಿ ಜಿಲ್ಲೆಯ ಶಿರೂರು ಗ್ರಾಮದಲ್ಲಿ ಜನಿಸಿದ ಮುಹಮ್ಮದ್ ಮೀರಾನ್ ಸಾಹೇಬ್, ಶಿಕ್ಷಣದ ಬಳಿಕ ಬದುಕು ಅರಸಿ ಕೊಲ್ಲಿ ರಾಷ್ಟ್ರಕ್ಕೆ ತೆರಳಿದರು. ಅನಿವಾಸಿ ಭಾರತೀಯ ಉದ್ಯಮಿಯಾಗಿ ಛಾಪು ಮೂಡಿಸಿರುವ ಅವರಿಗೆ, ತಾಯ್ನೆಲ, ತಾಯ್ನುಡಿಯೆಂದರೆ ಅಪಾರ ಪ್ರೀತಿ.

ವಿದೇಶದಲ್ಲಿದ್ದುಕೊಂಡೆ ತವರೂರಿನ ಅಭಿವೃದ್ಧಿಗೆ ಶ್ರಮಿಸುತ್ತಿರುವ ವಿರಳ ಕನ್ನಡಿಗ. ಗಲ್ಫ್ ನ ಕುಂದಾಪ್ರ ಕನ್ನಡ ಬಳಗ, ಶಿರೂರು ಅಸೋಸಿಯೇಷನ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ 40 ವರ್ಷಗಳಿಂದಲೂ ಕೊಲ್ಲಿ ರಾಷ್ಟ್ರಗಳಲ್ಲಿ ಕನ್ನಡ ನಾಡು ನುಡಿಯ ಸೇವೆ. ಕರ್ನಾಟಕದ ಹಲವೆಡೆ ಜನಪರ ಕಾರ್ಯಕ್ರಮಗಳ ಮುಖೇನ ನೂರಾರು ಬಡಕುಟುಂಬಗಳಿಗೆ ಮುಹಮ್ಮದ್ ಮೀರಾನ್ ಸಾಹೇಬ್ ನೆರವಾಗಿದ್ದಾರೆ. ಶಿರೂರಿನ ಖ್ಯಾತ ಶಿಕ್ಷಣ ಸಂಸ್ಥೆ ಗ್ರೀನ್ ವ್ಯಾಲಿ ನ್ಯಾಷನಲ್ ಸ್ಕೂಲ್ ಹಾಗು ಪಿಯು ಕಾಲೇಜು ಇದರ ಆಡಳಿತ ಟ್ರಸ್ಟಿಯಾಗಿದ್ದಾರೆ. 

ಹುಟ್ಟೂರಿಗೆ ಆಂಬ್ಯುಲೆನ್ಸ್, ಕಸದ ವಾಹನ ಸೇರಿದಂತೆ ಹಲವು ಸೌಲಭ್ಯಗಳನ್ನು ಧಾರೆಯೆರೆದಿರುವ ಸಮಾಜಸೇವಕರಾಗಿದ್ದಾರೆ. ಇಂತಹ ಮಹನೀಯರಿಗೆ 2020ನೆ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲು ಹೆಮ್ಮೆಯೆನಿಸುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನುಡಿದಿದೆ.

ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್.ರಂಗಪ್ಪ ಸೇರಿದಂತೆ ಮುಹಮ್ಮದ್ ಮೀರಾನ್ ಸಾಹೇಬ್ ಅವರ ಕುಟುಂಬ ಸದಸ್ಯರು, ಸ್ನೇಹಿತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News