ನಾನೊಂದು ನಾಲ್ಕೈದು ಜನರ ತಲೆ ತೆಗೆಸಬೇಕಿದೆ, ಅನುಮತಿ ಕೊಡ್ಸಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಗ್ರಹ

Update: 2021-09-20 14:13 GMT
ರಮೇಶ್ ಕುಮಾರ್ 

ಬೆಂಗಳೂರು, ಸೆ. 20: `ಶಾಸಕರು ಮತ್ತು ಸಂಸದರು ಹೇಳಿದ್ದೆಲ್ಲವನ್ನು ಅಧಿಕಾರಿಗಳು ಕೇಳುವುದಾದರೆ ನಾನೊಂದು ನಾಲ್ಕೈದು ಜನರ ತಲೆ ತೆಗಿಸಬೇಕಿದೆ, ಅನುಮತಿ ಕೊಡಿಸಿ' ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್, ವಿಧಾನಸಭೆ ಸ್ಪೀಕರ್ ಕಾಗೇರಿ ಅವರಿಗೆ ಆಗ್ರಹಿಸಿದ ಪ್ರಸಂಗ ನಡೆಯಿತು.

ಸೋಮವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ರಾಜ್ಯದ ರಸ್ತೆಗಳಲ್ಲಿನ ಅವೈಜ್ಞಾನಿಕ ರಸ್ತೆ ಉಬ್ಬುಗಳ(ಹಂಪ್ಸ್) ವಿಷಯ ಪ್ರಸ್ತಾಪಿಸಿದ ಅವರು, ಹೊಸಕೋಟೆ ಮತ್ತು ಮಾಡಿಕೇರೆ ಕ್ರಾಸ್ ಮಧ್ಯೆ ಕೆಶಿಪ್ ಸಂಸ್ಥೆ ನಿರ್ಮಿಸಿರುವ 52 ಕಿ.ಮೀ. ರಸ್ತೆಯಲ್ಲಿ 47 ರಸ್ತೆ ಉಬ್ಬುಗಳನ್ನು ಹಾಕಲಾಗಿದೆ. ಇದೇ ವಿಚಾರದ ಬಗ್ಗೆ ಎರಡು ಬಾರಿ ಪ್ರಶ್ನೆ ಮಾಡಿದ್ದೇನೆ.

ಲೋಕೋಪಯೋಗಿ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿಯೇ ಇಲ್ಲವೇ. ಮನಸೋ ಇಚ್ಛೆ ಎಲ್ಲಿ ಬೇಕಾದರೂ ರಸ್ತೆ ಉಬ್ಬುಗಳನ್ನು ಹಾಕಲು ಅವಕಾಶವಿದೆಯೇ ಅಥವಾ ಇದಕ್ಕೆ ಏನಾದರೂ ರೀತಿ-ನೀತಿ ಇದೆಯೇ? ರಸ್ತೆ ಉಬ್ಬುಗಳು ಅವೈಜ್ಞಾನಿಕ ಅಂದ್ರೆ, ಅಧಿಕಾರಿಗಳು ಏನು ಮಾಡುತ್ತಿದ್ದಾರೆ.

ಈ ರಸ್ತೆಗಳು ಸರಕಾರದ ಆಸ್ತಿ ಅಲ್ಲವೇ? ಪ್ರತಿ ಕಿಲೋಮೀಟರ್, ಅರ್ಧ ಕಿಲೋಮೀಟರ್‍ಗೆ ಒಂದು ರಸ್ತೆ ಉಬ್ಬು ಅಳವಡಿಸಿದರೆ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರಸ್ತೆ ಏಕೆ ಮಾಡಿಸಬೇಕು. ಅಧಿಕಾರಿಗಳು ಆ ರಸ್ತೆಗಳನ್ನು ನೋಡುವುದಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಲಾಪದಲ್ಲಿ ನಾನು ಪ್ರಶ್ನೆ ಕೇಳಿದ್ದಕ್ಕೆ ಘನತೆ ಬರಬೇಕಾದರೆ, ಪ್ರಶ್ನೋತ್ತರಕ್ಕೆ ಮಹತ್ವ ಬರಬೇಕಾದರೆ, ಕೂಡಲೇ ನಿಮ್ಮ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಆಗ ಅಧಿಕಾರಿಗಳ ದುರಹಂಕಾರದಿಂದ ವರ್ತಿಸುವುದಿಲ್ಲ ಎಂದು ರಮೇಶ್ ಕುಮಾರ್ ಆಗ್ರಹಿಸಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್ ಕಾಗೇರಿ, `ರಸ್ತೆ ಅಪಘಾತಗಳು ಸಂಭವಿಸಿದ ಸಂದರ್ಭದಲ್ಲಿ ಸ್ಥಳೀಯರೇ ಒತ್ತಾಯ ಮಾಡಿ ರಸ್ತೆ ಉಬ್ಬುಗಳನ್ನು ಹಾಕಿಸುತ್ತಾರೆ. ಆದರೆ, ಅವೈಜ್ಞಾನಿಕವಾಗಿ ರಸ್ತೆ ಉಬ್ಬುಗಳಿಂದ ಜನರಿಗೆ ತೊಂದರೆ ಆಗುತ್ತಿದೆ. ಕೆಲವೊಮ್ಮೆ ನಾವುಗಳೇ ಅಧಿಕಾರಿಗಳಿಗೆ ಹೇಳಿರುತ್ತೇವೆ ಎಂದು ಉಲ್ಲೇಖಿಸಿದರು.

ಶಾಸಕರು, ಸಂಸದರು ಹೇಳಿದರೆ ರಸ್ತೆ ಉಬ್ಬುಗಳನ್ನು ಹಾಕುತ್ತಾರೆಂದರೆ ನಾವು ಆ ಮಟ್ಟಕ್ಕೆ ಬಂದಿದ್ದು ಸರಿಯಲ್ಲ. ಹಾಗಾದರೆ ನಾವು ಹೇಳುವ ಎಲ್ಲ ಕೆಲಸ ಮಾಡುವಂತಿದ್ದರೆ ನಾನೊಂದು ನಾಲ್ಕೈದು ಜನರ ತಲೆ ತೆಗೆಸಬೇಕು, ಅದಕ್ಕೆ ಅನುಮತಿ ಕೊಡ್ಸಿ ಎಂದು ರಮೇಶ್ ಕುಮಾರ್ ನುಡಿದರು.

ಯಾವುದೋ ಗ್ರಾಮದಲ್ಲಿ ಅಪಘಾತ ಆಗುತ್ತೆ. ಅಲ್ಲಿಗೆ ನಾಲ್ಕೈದು ಮಂದಿ ರೌಡಿಗಳು ಬಂದು ಗಲಾಟೆ ಮಾಡಿದರೆ ಅವರಿಗೆ ಹೆದರಿಕೊಂಡು ರಸ್ತೆ ಉಬ್ಬುಗಳನ್ನು ಹಾಕಿಸಲು ಸಾಧ್ಯವೇ? ಹಾಗಾದರೆ ರಾಜ್ಯದ ಅಧಿಕಾರವನ್ನು ಯಾರ ಕೈಗೆ ಕೊಟ್ಟಿದ್ದೇವೆ. ನಾವು ಕೋಟ್ಯಂತರ ರೂಪಾಯಿ ಹಣ ಹಾಕಿ ರಸ್ತೆ ಏಕೆ ಮಾಡಬೇಕು ಎಂದು ರಮೇಶ್ ಕುಮಾರ್ ವಾಗ್ದಾಳಿ ನಡೆಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಎಲ್ಲಕ್ಕೂ ಅಧಿಕಾರಿಗಳನ್ನು ಹೊಣೆ ಮಾಡಲು ಸಾಧ್ಯವಿಲ್ಲ. ಆದರೆ, ಅವೈಜ್ಞಾನಿಕ ರಸ್ತೆ ಉಬ್ಬುಗಳ ತೆರವುಗೊಳಿಸುವ ಸಂಬಂಧ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

ಆರಂಭಕ್ಕೆ ವಿಷಯಕ್ಕೆ ಧ್ವನಿಗೂಡಿಸಿದ ಹಲವು ಸದಸ್ಯರು, ರಾಜ್ಯದ ರಸ್ತೆಗಳಲ್ಲಿ ಹಾಕಿರುವ ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ತೆರವುಗೊಳಿಸಬೇಕು. ಅನಗತ್ಯವಾಗಿ ರಸ್ತೆ ಉಬ್ಬುಗಳನ್ನು ಹಾಕಲು ಅನುಮತಿ ನೀಡಿದ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News