ದಿಲ್ಲಿಯಲ್ಲಿನ ರೈತರ ಹೋರಾಟ ಪ್ರಾಯೋಜಿತ, ರಾಜಕೀಯ ಪ್ರೇರಿತ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2021-09-20 14:53 GMT

ಬೆಂಗಳೂರು, ಸೆ. 20: `ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹಾಗೂ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ರಾಷ್ಟ್ರದಲ್ಲಿ ನಡೆಯುತ್ತಿರುವ ರೈತರ ಚಳವಳಿ `ಪ್ರಾಯೋಜಿತ'. ಮಾತ್ರವಲ್ಲ, ರಾಜಕೀಯ ಪ್ರೇರಿತ ಹೋರಾಟ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕ್ರಿಯೆ ನೀಡಿದ್ದಾರೆ.

ಸೋಮವಾರ ವಿಧಾನಸಭೆಯಲ್ಲಿ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಸಹಿತ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಷಯದ ಮೇಲೆ ನಿಯಮ 69ರಡಿ ನಡೆದ ಚರ್ಚೆಗೆ ಉತ್ತರಿಸಿದ ಅವರು, `ಪೆಟ್ರೋಲ್, ಡೀಸೆಲ್ ಮಾರಾಟ ತೆರಿಗೆ ಮೂಲಕ ಬಂದ ಹಣದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರಕಾರ ರಸ್ತೆಗಳನ್ನು ನಿರ್ಮಿಸಲು ಹಾಗೂ ರೈತರಿಗೆ ಬೆಂಬಲ ಬೆಲೆ ನೀಡಲು ವೆಚ್ಚ ಮಾಡುತ್ತಿದ್ದಾರೆ' ಎಂದರು.

`ಎಲ್ಲ ಸರಕಾರಗಳ ಅವಧಿಯಲ್ಲಿಯೂ ಬೆಲೆಗಳು ಏರಿಕೆಯಾಗುತ್ತಿದ್ದು, ಬೆಲೆ ಏರಿಕೆ ನಿರಂತರ ಪ್ರಕ್ರಿಯೆ. ಯಾರೊಬ್ಬರನ್ನು ಇದಕ್ಕೆ ಹೊಣೆ ಮಾಡಲು ಸಾಧ್ಯವಿಲ್ಲ' ಎಂದು ಬೊಮ್ಮಾಯಿ ತಿಳಿಸಿದರು. ಇದಕ್ಕೆ ಆಕ್ಷೇಪಿಸಿದ ಸಿದ್ದರಾಮಯ್ಯ, `ರೈತರಿಗೆ ಬೆಂಬಲ ಬೆಲೆ ಹೆಚ್ಚಿಸಿದ್ದರೂ ಒಂದು ವರ್ಷದಿಂದ ದಿಲ್ಲಿ ಸೇರಿದಂತೆ ರಾಷ್ಟ್ರ ವ್ಯಾಪಿ ಎಲ್ಲ ರಾಜ್ಯಗಳಲ್ಲಿಯೂ ರೈತರು ಏಕೆ ಪ್ರತಿಭಟನೆ ನಡೆಸುತ್ತಿದ್ದಾರೆ' ಎಂದು ಪ್ರಶ್ನಿಸಿದರು. `ದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಪ್ರಾಯೋಜಿತ' ಎಂದು ಸಿಎಂ ದೂರಿದರು.

ಸಿಎಂ ಹೇಳಿಕೆಗೆ ಆಕ್ಷೇಪಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, `ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಅಪಮಾನ ಸರಿಯಲ್ಲ. ಕೃಷಿ ಕಾಯ್ದೆಗಳ ರದ್ದುಗೊಳಿಸಲು ಹಾಗೂ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿ ದಿಲ್ಲಿ ಸೇರಿದಂತೆ ದೇಶದಲ್ಲಿ ರೈತರು ಚಳವಳಿ ಮಾಡುತ್ತಿದ್ದಾರೆ. ಸಿಎಂ ರೈತರ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದರು.

ಇದಕ್ಕೆ ಧ್ವನಿಗೂಡಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, `ದಿಲ್ಲಿಯಲ್ಲಿನ ರೈತರ ಹೋರಾಟ ಪ್ರಾಯೋಜಿತ ಎನ್ನುವುದಾದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಾರು ಈ ಚಳವಳಿಗೆ ಪ್ರಾಯೋಜಕತ್ವ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

ಈ ಹಂತದಲ್ಲಿ ಎದ್ದು ನಿಂತ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, `ಬೆಲೆ ಏರಿಕೆ ವಿರುದ್ಧ ನಿಮ್ಮದೆ(ಬಿಜೆಪಿ) ಪಕ್ಷದ ಸುಬ್ರಹ್ಮಣ್ಯಸ್ವಾಮಿ ಏಕೆ ವಿರೋಧ ವ್ಯಕ್ತಪಡಿಸಿದ್ದಾರೆ ಮತ್ತು ಅವರ ಯಾರು? ಎಂದು ಖಾರವಾಗಿ ಪ್ರಶ್ನಿಸಿದರು. ಇದರಿಂದ ಸದನದಲ್ಲಿ ಕೆಲ ಕಾಲ ಗದ್ದಲ ಸೃಷ್ಟಿಯಾಯಿತು.

ಈ ನಡುವೆ ಮಾತು ಮುಂದುವರಿಸಿದ ಬಸವರಾಜ ಬೊಮ್ಮಾಯಿ, `ದಿಲ್ಲಿ ರೈತರ ಹೋರಾಟಕ್ಕೆ ಕೆಲವರು ಪ್ರಾಯೋಜಕತ್ವ ಇದೆ. ಅಲ್ಲದೆ ಸಂಪೂರ್ಣ ರಾಜಕೀಯ ಪ್ರೇರಿತ. ಈ ಸತ್ಯವನ್ನು ಹೇಳಲು ನನಗೆ ಯಾವುದೇ ಹಿಂಜರಿಕೆ, ಮುಜುಗರವೂ ಇಲ್ಲ. ಸತ್ಯವನ್ನು ಹೇಳಲು ನಾನು ಎಂದೂ ಹಿಂದು ಮುಂದು ನೋಡುವುದಿಲ್ಲ' ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News