ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಮಲೆನಾಡು ರೈತ ಹೋರಾಟ ಸಮಿತಿ, ಶರಾವತಿ ಮುಳುಗಡೆ ಸಂತ್ರಸ್ತರಿಂದ ಧರಣಿ

Update: 2021-09-20 16:52 GMT

ಶಿವಮೊಗ್ಗ(ಸೆ.20): ಶರಾವತಿ ವಿದ್ಯುತ್ ಯೋಜನೆಗಾಗಿ ಭೂಮಿ ಕಳೆದುಕೊಂಡವರಿಗೆ ಹಕ್ಕುಪತ್ರ ನೀಡಲು ಆಗ್ರಹಿಸಿ ಮಲೆನಾಡು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ವಿದ್ಯುತ್ ಯೋಜನೆಗಾಗಿ ಸಾಗರ, ಹೊಸನಗರ ತಾಲ್ಲೂಕಿನ ರೈತರು 1 ಲಕ್ಷ ಎಕರೆಗೂ ಹೆಚ್ಚು ಭೂಮಿಯನ್ನು ಕಳೆದುಕೊಂಡಿದ್ದಾರೆ. ಭೂಮಿ ಕಳೆದುಕೊಂಡು 60 ವರ್ಷವಾದರೂ ವಿವಿಧ ಪ್ರದೇಶಗಳಲ್ಲಿ ವಾಸಿಸುತ್ತಿರುವವರಿಗೆ ಮನೆ, ಜಮೀನಿನ ಹಕ್ಕುಪತ್ರಗಳನ್ನು ಇದುವರೆಗೂ ಕೊಟ್ಟಿಲ್ಲ ಎಂದು ದೂರಿದರು.

ಕಾಗೋಡು ತಿಮ್ಮಪ್ಪನವರು ಕಂದಾಯ ಸಚಿವರಾಗಿದ್ದಾಗ ಆಗ ದಕ್ಷ ಅಧಿಕಾರಿಯಾಗಿದ್ದ ಮದನ್ ಗೋಪಾಲ್ ಅವರ ಪ್ರಯತ್ನದಿಂದ ಅರಣ್ಯ ಇಲಾಖೆಯ 9600 ಎಕರೆ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿ ಕಂದಾಯ ಇಲಾಖೆಗೆ ವರ್ಗಾಯಿಸಲಾಗಿತ್ತು. ಆ ನಂತರದಿಂದ ಮುಳುಗಡೆ ಸಂತ್ರಸ್ಥ ರೈತರಿಗೆ ಹಕ್ಕು ಪತ್ರ ನೀಡಲು ಆರಂಭವಾಯಿತು. ಆದರೆ, ಕೆಲವು ಪ್ರಗತಿ ವಿರೋಧಿಗಳು ಇದನ್ನು ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿದರು. ಹೈಕೋರ್ಟ್ ಡಿನೋಟಿಫಿಕೇಷನ್ ಮಾಡಿದ್ದು ಕಾನೂನು ಬಾಹಿರ ಎಂದು ಕಳೆದ ಮಾರ್ಚ್ ನಲ್ಲಿ ತೀರ್ಪು ನೀಡಿದೆ. ಈ ತೀರ್ಪು ಬಂದು 6 ತಿಂಗಳಾದರೂ, ಇನ್ನೂ ಮೇಲ್ಮನವಿ ಸಲ್ಲಿಸಿಲ್ಲ. ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಶರಾವತಿ ಮುಳುಗಡೆ ಸಂತ್ರಸ್ಥರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ತಕ್ಷಣವೇ ಮೇಲ್ಮನವಿ ಸಲ್ಲಿಸಬೇಕು. ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಅವರು ಮುಳುಗಡೆ ಸಂತ್ರಸ್ಥರ ಸಭೆಯಲ್ಲಿ ಕೈಗೊಂಡಿದ್ದ ನಡಾವಳಿ ಅನುಷ್ಠಾನಗೊಳಿಸಬೇಕು. ಕೆಲವರು ಮುಳುಗಡೆ ರೈತರನ್ನು ನಕಲಿ ಪರಿಸರವಾದಿಗಳು ಎಂದು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಇದು ತಪ್ಪಬೇಕು. ಕೂಡಲೇ ವಾಸದ ಮನೆ ಮತ್ತು ಜಮೀನಿನ ಮಾಲೀಕತ್ವ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಹೋರಾಟ ಸಮಿತಿ ಸಂಚಾಲಕ ತೀ.ನಾ. ಶ್ರೀನಿವಾಸ್, ಪ್ರಮುಖರಾದ ಎಂ.ಬಿ. ರಾಜಪ್ಪ, ಷಣ್ಮುಖ, ಧರ್ಮರಾಜ್, ವೆಂಕಟೇಶ್, ಕೃಷ್ಣಮೂರ್ತಿ, ಶಿವಣ್ಣ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News