ಹುದಿಕೇರಿ: ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ; ಆರೋಪಿಗೆ ಜೈಲು ಶಿಕ್ಷೆ

Update: 2021-09-21 10:13 GMT
ಸಾಂದರ್ಭಿಕ ಚಿತ್ರ (Source: PTI)

ಮಡಿಕೇರಿ ಸೆ.21: ಮದುವೆಯಾಗುವುದಾಗಿ ನಂಬಿಸಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗೆ ವಿರಾಜಪೇಟೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.

  ಪರಿಶಿಷ್ಟ ಪಂಗಡದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದ ಆರೋಪಿ ಅಸ್ಸಾಂ ರಾಜ್ಯದ ಸುಹರ್ ಅಲಿ (ಚಹರ್ ಅಲಿ) (31) ಎಂಬಾತನೇ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಅಸ್ಸಾಂನಿಂದ ಕೊಡಗಿನ ಹುದಿಕೇರಿ ಹೈಸೊಡ್ಲೂರು ಗ್ರಾಮಕ್ಕೆ ಬಂದಿದ್ದ ಈತ ಕಾಫಿ ತೋಟದಲ್ಲಿ ಕೂಲಿ ಕಾರ್ಮಿಕನಾಗಿದ್ದ. 2016ನೇ ಇಸವಿಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದಡಿ ಸುಹರ್ ಅಲಿ ವಿರುದ್ಧ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿರಾಜಪೇಟೆಯ ಅಂದಿನ ಪೊಲೀಸ್ ಉಪ ಅಧೀಕ್ಷಕ ನಾಗಪ್ಪ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ವಿರಾಜಪೇಟೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪಿ ಸುಹರ್ ಅಲಿ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಎಸ್.ಆರ್.ದಿಂಡಲ್ ಕೊಪ್ಪ ಶಿಕ್ಷೆ ವಿಧಿಸಿ ತೀರ್ಪಿತ್ತಿದ್ದಾರೆ.

ಕಲಂ 363 ಐಪಿಸಿಯಡಿಯಲ್ಲಿ 5 ವರ್ಷಗಳ ಸಾದಾ ಜೈಲು ಶಿಕ್ಷೆ 5 ಸಾವಿರ ದಂಡ, ದಂಡವನ್ನು ಪಾವತಿ ಮಾಡಲು ತಪ್ಪಿದ್ದಲ್ಲಿ 6 ತಿಂಗಳ ಸಾದಾ ಜೈಲು ಶಿಕ್ಷೆ. ಕಲಂ 376 ಐಪಿಸಿ ಯಡಿಯಲ್ಲಿ 10 ವರ್ಷ ಕಠಿಣ ಸಜೆ ಮತ್ತು ರೂ. 20 ಸಾವಿರ ದಂಡ, ದಂಡವನ್ನು ಪಾವತಿ ಮಾಡಲು ತಪ್ಪಿದ್ದಲ್ಲಿ 2 ವರ್ಷ ಸಾದಾ ಜೈಲು ಶಿಕ್ಷೆ. ಕಲಂ 6 ಪೊಕ್ಸೋ ಕಾಯ್ದೆಯಡಿ 10 ವರ್ಷ ಕಠಿಣ ಸಜೆ ಮತ್ತು 20 ಸಾವಿರ ದಂಡ, ದಂಡವನ್ನು ಪಾವತಿ ಮಾಡಲು ತಪ್ಪಿದ್ದಲ್ಲಿ 1 ವರ್ಷ ಸಾದಾ ಜೈಲು ಶಿಕ್ಷೆ. ಎಸ್.ಸಿ/ಎಸ್.ಟಿ ಕಾಯ್ದೆಯಡಿಯಲ್ಲಿ 1 ವರ್ಷ ಸಾದಾ ಸಜೆ ನೀಡಿದ್ದಾರೆ.

ಸರಕಾರದ ಪರವಾಗಿ ಅಭಿಯೋಜಕ ಯಾಸೀನ್ ಅಹ್ಮದ್ ವಾದ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News