'ನನ್ನ ಪಂಚೆ ಕಳಚಿಕೊಂಡಿದೆ, ಹೊಟ್ಟೆ ದಪ್ಪ ಆಗಿ ಪಂಚೆ ನಿಲ್ಲುತ್ತಿಲ್ಲ': ಸಿದ್ದರಾಮಯ್ಯ

Update: 2021-09-22 13:58 GMT

ಬೆಂಗಳೂರು, ಸೆ. 22: `ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ'ದ ಕುರಿತು ಚರ್ಚೆಯ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ `ಪಂಚೆ' ಕಳಚಿಕೊಂಡಿತು. ಈ ಪ್ರಸಂಗ ವಿಧಾನಸಭೆಯಲ್ಲಿ ಕೆಲಕಾಲ ಸ್ವಾರಸ್ಯಕರ ಚರ್ಚೆಗೆ ನಾಂದಿಯಾಯಿತು.

ಬುಧವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ಸಾಮೂಹಿಕ ಅತ್ಯಾಚಾರ ಘಟನೆ ಕುರಿತು ಸಿದ್ದರಾಮಯ್ಯ ಅತ್ಯಂತ ಗಂಭೀರವಾಗಿ ಪೊಲೀಸರು ಮತ್ತು ಸರಕಾರದ ವೈಫಲ್ಯಗಳನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಅವರ ಪಂಚೆ ಕಳಚಿದ್ದು, ಅದು ಅವರಿಗೆ ತಕ್ಷಣವೇ ಗಮನಕ್ಕೆ ಬಂದಿರಲಿಲ್ಲ.

ಕೂಡಲೇ ಇದನ್ನು ಗಮನಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ತಕ್ಷಣವೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಆಸನದ ಬಳಿ ಬಂದು, `ಸರ್ ನಿಮ್ಮ ಪಂಚೆ ಕಳಚಿಕೊಂಡಿದೆ' ಎಂದು ಕಿವಿಯಲ್ಲಿ ಮೆಲ್ಲಗೆ ಹೇಳಿ ತಮ್ಮ ಆಸನಕ್ಕೆ ತೆರಳಿದರು. ಇದರಿಂದ ಎಚ್ಚೆತ್ತುಕೊಂಡ ಸಿದ್ದರಾಮಯ್ಯ, `ನನ್ನ ಪಂಚೆ ಕಳಚಿಕೊಂಡುಬಿಟ್ಟಿದೆ. ಕಟ್ಟಿಕೊಂಡು ಆಮೇಲೆ ಮಾತನಾಡುತ್ತೇನೆ' ಎಂದು ಪಂಚೆ ಸರಿಪಡಿಸಿಕೊಳ್ಳುತ್ತಲೇ `ನನ್ನ ಪಂಚೆ ಕಳಚಿಕೊಂಡು ಬಿಟ್ಟಿದೆ ಈಶ್ವರಪ್ಪ' ಎಂದರು.

'ಕೋವಿಡ್ ಸೋಂಕು ಬಂದ ನಂತರ ಏಕೋ ಏನೋ ನನ್ನ ಹೊಟ್ಟೆ ಸ್ವಲ್ಪ ದಪ್ಪ ಆಯ್ತು, ಜೊತೆಗೆ ಭಾರವೂ ನಾಲ್ಕೈದು ಕೆಜಿ ಹೆಚ್ಚಾಗಿದೆ. ಹೀಗಾಗಿ ನನ್ನ ಪಂಚೆ ಪದೇ ಪದೆ ಕಳಚಿಹೋಗುತ್ತಿದೆ' ಎಂದು ಸಿದ್ದರಾಮಯ್ಯ ಹೇಳಿದ್ದರಿಂದ ಸದನದಲ್ಲಿ ನಲೆ ಅಲೆ ಉಕ್ಕಿತು.

ಈ ಸಂದರ್ಭದಲ್ಲಿ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಎದ್ದು ನಿಂತು, `ನಮ್ಮ ಪಕ್ಷದ ಅಧ್ಯಕ್ಷರು ಪಕ್ಷದ ಮಾನ ಹೋಗಬಾರದು ಎಂದು ಗುಟ್ಟಾಗಿ ಕಿವಿಯಲ್ಲಿ ಹೇಳಿ ಹೋದರೆ, ಇವರು ಅದನ್ನು ಊರಿಗೆಲ್ಲಾ ಹೇಳ್ತಾರೆ. ನಿಮ್ಮ ಶ್ರಮವೆಲ್ಲ ವ್ಯರ್ಥವಾಯಿತು' ಎಂದರು.

`ನೀವು ಮಾತನಾಡುತ್ತಿರುವ ವಿಚಾರ ಅಂತಹದ್ದು ಎಂದು ರಮೇಶ್ ಕುಮಾರ್ ಹೇಳಿದರು. ಈ ವೇಳೆ ಸ್ಪೀಕರ್ ಪೀಠದಲ್ಲಿ ಆಸೀನರಾಗಿದ್ದ ಕುಮಾರ್ ಬಂಗಾರಪ್ಪ, ನಗುತ್ತಾ, ನೀವು ಹಾಗೆ ಹೇಳುವುದು ಸರಿಯಲ್ಲ ಎಂದರು. `ಅವರ ಉದ್ಯೋಗವೇ ನಮ್ಮ ಪಂಚೆ ಕಳಚೋದು, ನೋಡಿ ಕಾಯ್ತಾ ಕೂತಿದ್ದಾರೆ' ಎಂದು ರಮೇಶ್ ಕುಮಾರ್, ಈಶ್ವರಪ್ಪನವರನ್ನು ಕಿಚಾಯಿಸಿದರು.

ಆಗ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, `ಅವರು ಪಾಪ ಪ್ರಯತ್ನ ಮಾಡುತ್ತಿರುತ್ತಾರೆ. ಅವೆಲ್ಲಾ ಸಾಧ್ಯ ಆಗುವುದಿಲ್ಲ. ಈ ಪಂಚೆ ಮೊದಲು ಬಿಚ್ಚಿಕೊಳ್ಳುತ್ತಿರಲಿಲ್ಲ. ಇತ್ತೀಚೆಗೆ ಪದೇ ಪದೇ ಬಿಚ್ಚಿ ಹೋಗುತ್ತಿದೆ ಎಂದರು. ಹೀಗಾಗಿಯೇ ಬಹಳ ಜನ ನಿಲುವಂಗಿ ಹಾಕಿಕೊಳ್ಳುತ್ತಾರೆ. ಅದನ್ನು ಹಾಕಿದರೆ ಪಂಚೆ, ಪ್ಯಾಂಟು ಬೇಕಿರುವುದಿಲ್ಲ. ಅದಕ್ಕೆ ನಾನು ಉದ್ದ ಇರುವ ಜುಬ್ಬವನ್ನೇ ಹಾಕ್ತೀನಿ ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News