ಸೆ. 27ಕ್ಕೆ ಭಾರತ್ ಬಂದ್‍ಗೆ ರೈತ ಸಂಘಟನೆಗಳ ಬೆಂಬಲ

Update: 2021-09-22 12:06 GMT

ಬೆಂಗಳೂರು, ಸೆ22: ಕೇಂದ್ರ ಸರಕಾರವು ಕೃಷಿ ಕಾಯ್ದೆಗಳನ್ನು ಏಕಾಏಕಿ ಜಾರಿಗೊಳಿಸಿದೆ. ಇದನ್ನು ರೈತರು ದೇಶವ್ಯಾಪಿ ಪ್ರತಿಭಟನೆಗಿಳಿದು ಇದೇ ಸೆ. 27ಕ್ಕೆ ಒಂದು ವರ್ಷವಾಗುತ್ತದೆ. ಈ ಹಿನ್ನೆಲೆಯಲ್ಲಿ ಅಂದು ಎಲ್ಲಾ ರೈತ ಸಂಘಟನೆಗಳು ಒಗ್ಗೂಡಿ, ಭಾರತ್ ಬಂದ್ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಸರಕಾರವು ಮಸೂದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ವಿ.ಆರ್. ನಾರಾಯಣರೆಡ್ಡಿ ಅವರು ತಿಳಿಸಿದರು.

ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರ ಸರಕಾರಗಳು ಕೃಷಿ ಮಸೂದೆಗಳನ್ನು ಯಾವುದೇ ಸಾರ್ವಜನಿಕ ಅಭಿಪ್ರಾಯಕ್ಕೆ ಒಳಪಡಿಸದೆ, ಕೃಷಿ ಕಾಯ್ದೆಗಳನ್ನು ಏಕಾಏಕಿ ಜಾರಿಗೊಳಿಸಿವೆ. ಇದನ್ನು ವಿರೋಧಿಸಿ ಎಲ್ಲಾ ರೈತ ಸಂಘಟನೆಗಳು, ದಲಿತಪರ ಸಂಘಟನೆಗಳು, ಹಿಂದುಳಿದ ವರ್ಗಗಳ ಸಂಘಟನೆಗಳು ಸೇರಿದಂತೆ ಎಲ್ಲಾ ಸಂಘಟನೆಗಳು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ಕೊಟ್ಟರು.

ಕೇಂದ್ರ ಸರಕಾರವು ಅಧಿಕಾರಕ್ಕೆ ಬರುವ ಮೊದಲು ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಲಾಗುವುದು ಎಂದು ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಆದರೆ ಇದುವರೆಗೂ ಜಾರಿಗೆ ತರುವುದಿರಲಿ, ಅದರ ಬಗ್ಗೆ ಪ್ರಸಾಪವನ್ನು ಸಹ ಮಾಡುತ್ತಿಲ್ಲ. ಅಲ್ಲದೇ ಸೂಕ್ತ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಸಹ ಘೋಷಿಸುತ್ತಿಲ್ಲ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಭಾರತ್ ಬಂದ್‍ಗೆ ಕರೆ ನೀಡಲಾಗಿದೆ ಎಂದು ಅವರು ತಿಳಿಸಿದರು. 

ಬಳಿಕ ಮಾತನಾಡಿದ ಯಲಹಂಕದ ನವೀನ್ ಗೌಡ ಅವರು, ಸರಕಾರವು ಶಿವರಾಮ ಕಾರಂತ ಬಡಾವಣೆ ಮತ್ತು ಪೆರಿಫೆರಲ್ ರಿಂಗ್ ರೋಡ್ ಮಾಡುವ ಯೋಜನೆಗೆ ಸಂಬಂಧಿಸಿದಂತೆ ನಗರದ ಸುತ್ತ ಸಾವಿರಾರು ಎಕರೆ ಕೃಷಿಭೂಮಿಯನ್ನು ವಶಪಡಿಸಿಕೊಂಡು, ಉಚ್ಚ ನ್ಯಾಯಲಯ ಆದೇಶದ ಹೆಸರಿನಲ್ಲಿ ರೈತರಿಗೆ ಕಡಿಮೆ ಪರಿಹಾರದ ಹಣವನ್ನು ನೀಡುತ್ತಿದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು. 
ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಎಸ್.ಬಿ., ಹರೀಶ್ ಅದ್ದೆ ಅವರು ಉಪಸ್ಥಿತಿಯಲ್ಲಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News