ಜಲಜೀವನ್ ಮಿಷನ್ ಯೋಜನೆ 2024ರೊಳಗೆ ಪೂರ್ಣ: ಸಚಿವ ಕೆ.ಎಸ್.ಈಶ್ವರಪ್ಪ

Update: 2021-09-22 12:09 GMT

ಬೆಂಗಳೂರು, ಸೆ. 22: `ಮನೆ ಮನೆಗೆ ನಲ್ಲಿ ನೀರಿನ ಸಂಪರ್ಕ ಒದಗಿಸುವ `ಜಲಜೀವನ್ ಮಿಷನ್ ಯೋಜನೆ'ಯನ್ನು 2024ರೊಳಗೆ ಪೂರ್ಣಗೊಳಿಸುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಭರವಸೆ ನೀಡಿದ್ದಾರೆ.

ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ತುಕಾರಾಮ್ ಈ. ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, `ರಾಜ್ಯದಲ್ಲಿ ಎಲ್ಲೆಲ್ಲಿ ನೀರಿನ ಲಭ್ಯತೆ ಇದೆಯೋ ಅಲ್ಲೆಲ್ಲ ಮನೆ-ಮನೆಗೆ ನಲ್ಲಿ ನೀರು ಒದಗಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದ್ದೇವೆ. 95 ಲಕ್ಷ ಮನೆಗಳಿಗೆ ನೀರು ಸಂಪರ್ಕ ಒದಗಿಸುವ ಗುರಿ ಹೊಂದಿದ್ದು, ಈಗಾಗಲೇ 35 ಲಕ್ಷ ಮನೆಗಳಿಗೆ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆ ಪ್ರಗತಿಯಲ್ಲಿದೆ' ಎಂದು ಹೇಳಿದರು.

`ಇನ್ನು ಎರಡು ವರ್ಷಗಳಲ್ಲಿ ಈ ಯೋಜನೆಯನ್ನ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ. ಹೀಗಾಗಿ ಶಾಸಕರು ತಮ್ಮ ಕ್ಷೇತ್ರದ ನೀರಿನ ಲಭ್ಯತೆ ಇರುವ ಗ್ರಾಮಗಳ ಬಗ್ಗೆ ಮಾಹಿತಿ ನೀಡಿ ಈ ಯೋಜನೆಯ ಅನುಷ್ಠಾನಕ್ಕೆ ಸರಕಾರದ ಜತೆ ಸಹಕರಿಸಬೇಕು' ಎಂದು ಅವರು ಕೋರಿದರು.
`ನೀರಿನ ಲಭ್ಯತೆ ಇರುವ ಎಲ್ಲ ಕಡೆ ಮನೆ ಮನೆಗೆ ಗಂಗೆ ಯೋಜನೆಯನ್ನು ಕೈಗೆತ್ತಿಕೊಂಡಿದ್ದೇವೆ. 2024ರ ವೇಳೆಗೆ ಗ್ರಾಮೀಣ ಭಾಗದ ಪ್ರತಿ ಮನೆಗೂ ನಲ್ಲಿ ನೀರು ಒದಗಿಸಬೇಕೆನ್ನುವುದು ಪ್ರಧಾನಿ ಮೋದಿ ಅವರ ಆಶಯವಾಗಿದೆ. ಅದರಂತೆ ಈ ಯೋಜನೆಯನ್ನು ಪೂರ್ಣಗೊಳಿಸುವುದು ಎಂದು ತಿಳಿಸಿದರು.

ನಿಮ್ಮ ಮನೆ ದೇವರು ನಮ್ಮ ಜಿಲ್ಲೆಯಲ್ಲಿದೆ

`ಕೆ.ಎಸ್.ಈಶ್ವರಪ್ಪನವರೆ ನೀವು ನಮ್ಮ ಜಿಲ್ಲೆ ಮೂಲದವರು. ನಿಮ್ಮ ಮನೆ ದೇವರು ನಮ್ಮ ಜಿಲ್ಲೆಯಲ್ಲಿದೆ. ಅಧಿಕಾರ ಶಾಶ್ವತವಲ್ಲ, ತಮ್ಮ ಅವಧಿಯಲ್ಲಿ ಜಿಲ್ಲೆಯ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಮೂಲಕ ನಿಮ್ಮ ಹೆಸರನ್ನು ಉಳಿಸಿಕೊಳ್ಳುವ ಕೆಲಸ ಮಾಡಿ'
-ತುಕಾರಾಮ್ ಈ. ಕಾಂಗ್ರೆಸ್ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News