ಲೋಕದ ಕಾವ್ಯಕ್ಕೆ ಕಣ್ಣು-ಕಿವಿ ಕೊಡುವ ಮನುಷ್ಯ ಕವಿಯಾಗುತ್ತಾನೆ: ಬಿ.ವಿ.ವಸಂತಕುಮಾರ್

Update: 2021-09-22 12:50 GMT

ಮಂಡ್ಯ ಸೆ.22: ಜೀವ ಸೃಷ್ಟಿ ಹೊರಹಾಕುವ ಸಂದರ್ಭದ ಹೆರಿಗೆಯ ನೋವು,ಜನಿಸಿದ ಮಗುವಿನ ದನಿ ಜಗತ್ತಿನ ಮೊದಲ ಕಾವ್ಯ. ಇಲ್ಲವೇ ನೀರಿನ ಹನಿ, ಗಾಳಿ ಬೀಸುವ ದನಿ ಕೂಡ ಮೊದಲ ಕಾವ್ಯ. ಇಂತಹ ಕಾವ್ಯದ ದನಿಗೆ  ಕಿವಿ-ಕಣ್ಣು ಕೊಡುವ ಮನುಷ್ಯ ಕವಿಯಾಗುತ್ತಾನೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ. ವಸಂತಕುಮಾರ್ ಅಭಿಪ್ರಾಯಪಟ್ಟರು.

ಅವರು ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ  ಎಂ.ಎಲ್. ಶ್ರೀಕಂಠೇಶಗೌಡ ಸಂಶೋಧನ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಕವನ ಸಂಕಲನಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಕಾವ್ಯವನ್ನು ಓದಿದರೆ ಸಾಲದು ಅನುಭವಿಸಬೇಕು ಎಂದರು.

ಕುವೆಂಪುರವರು ತಮ್ಮ ‘ಕೊಳಲು’ ಕವನದಲ್ಲಿ ಎಲ್ಲೆಲ್ಲಿಂದ ತಾನು ಕವಿತೆಗಳನ್ನು ತಂದೆ ಎಂಬುದನ್ನು, ದ.ರಾ ಬೇಂದ್ರೆಯವರು ತಮ್ಮ ‘ಗರಿ’ ಕವನದಲ್ಲಿ ನನ್ನ ಕವಿತೆಯ ಗರಿಗಳನ್ನು ಹಾರಿ ಬಿಡುತ್ತೇನೆ ಎಂದು ಹೇಳಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಕವನ ಸಂಕಲನಗಳನ್ನು ಕುರಿತು ಪ್ರಸಿದ್ಧ ನಾಟಕಕಾರ ಡಾ.ರಾಜಪ್ಪ ದಳವಾಯಿ  ಮಾತನಾಡಿದರು.

ಸಮಾರಂಭದಲ್ಲಿ ಸಾಹಿತಿ, ಪತ್ರಕರ್ತ ಸಂತೆಕಸಲಗೆರೆ ಪ್ರಕಾಶ್ ಅವರ ‘ಕಾಲನ ಸುಳಿಗೆ ಸಿಲುಕಿದ ಕಾಲ’ ಹಾಗೂ ಶಿಕ್ಷಕಿ, ನಿರೂಪಕಿ ಎಂ.ಯು.ಶ್ವೇತ ಅವರ ‘ಅಗ್ನಿ ಕುಸುಮ’ ಕವನಸಂಕಲನಗಳನ್ನು ಲೋಕಾರ್ಪಣೆಗೊಳಿಸಲಾಯಿತು. 

ನಿವೃತ್ತ ಪ್ರಾಧ್ಯಾಪಕ ಎಚ್.ಎಸ್.ಮುದ್ದೇಗೌಡ, ಕರ್ನಾಟಕ ಸಂಘದ ಅಧ್ಯಕ್ಷ ಬಿ.ಜಯಪ್ರಕಾಶಗೌಡ, ಪ್ರಾಧ್ಯಾಪಕರಾದ ಕಾರ್ಕಳ್ಳಿ ಕೆಂಪಮ್ಮ, ಕಾರಸವಾಡಿ ಸುರೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News