ಕೊಡವರಿಗೆ ಬಂದೂಕು ಹೊಂದಲು ‘ವಿನಾಯಿತಿ’ ಎತ್ತಿ ಹಿಡಿದ ಹೈಕೋರ್ಟ್

Update: 2021-09-22 12:56 GMT

ಬೆಂಗಳೂರು, ಸೆ.22: ಕೊಡವ ಸಮುದಾಯ ಮತ್ತು ಜಮ್ಮಾ ಹಿಡುವಳಿದಾರರು ಬಂದೂಕು ಹೊಂದಲು ವಿನಾಯಿತಿ ನೀಡಿ ಕೇಂದ್ರ ಸರಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. 

ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಚೇತನ್ ವೈ.ಕೆ. ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠ, ಈ ಆದೇಶವನ್ನು ಎತ್ತಿಹಿಡಿದಿದೆ. 

ಕೊಡವ ಸಮುದಾಯವು, ಯೋಧ ಸಮುದಾಯವಾಗಿದ್ದು ವಿನಾಯಿತಿಯ ಸವಲತ್ತನ್ನು ಸ್ವಾತಂತ್ರ್ಯಪೂರ್ವ ಕಾಲದಿಂದಲೂ ಅನುಭವಿಸುತ್ತಿದೆ, ಅದೇ ರೀತಿ ಜಮ್ಮಾ ಹಿಡುವಳಿದಾರರು ಸಹ ಸ್ವಾತಂತ್ರ್ಯಪೂರ್ವದಿಂದಲೂ ವಿನಾಯಿತಿಯನ್ನು ಅನುಭವಿಸುತ್ತಿದ್ದಾರೆ. 

ಅಲ್ಲದೆ, ಹತ್ತು ವರ್ಷಗಳ ಅವಧಿಗೆ ಈ ವಿನಾಯಿತಿಯನ್ನು ಸೂಕ್ತ ರೀತಿಯಲ್ಲಿ ನೀಡಲಾಗಿದೆ. ನೀಡಲಾಗಿರುವ ವಿನಾಯಿತಿಯು ಸಹ ಕೆಲವೊಂದು ನಿಬಂಧನೆ, ಷರತ್ತುಗೊಳಪಟ್ಟಿದೆ. ಹೀಗಾಗಿ, ಅಧಿಸೂಚನೆಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿಯಲಾಗಿದೆ ಎಂದು ಪೀಠವು ಆದೇಶಿಸಿತು.

ಶಸ್ತ್ರಾಸ್ತ್ರ ಕಾಯಿದೆಯ ಉದ್ದೇಶ ಮತ್ತು ಕಾರಣಗಳನ್ನು ನಾವು ಪರಿಗಣಿಸಿದ್ದು, ಅವರ ಪೂರ್ವಾಪರಗಳು ಅವರು ಶಸ್ತ್ರ ಹೊಂದುವುದಕ್ಕೆ ಅಡ್ಡಿಯಾಗದ ಪಕ್ಷದಲ್ಲಿ ಶಸ್ತ್ರಗಳನ್ನು ಸ್ವಯಂ ರಕ್ಷಣೆಗಾಗಿ ಹೊಂದಲು ಅವರಿಗೆ ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ, ಪ್ರಕರಣದಲ್ಲಿ ಮಧ್ಯಪ್ರವೇಶಿಸುವ ಅಗತ್ಯ ಬೀಳುವುದಿಲ್ಲ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿತು.

ಅರ್ಜಿಯಲ್ಲಿ ಏನಿದೆ: ಬ್ರಿಟಿಷರನ್ನು ಒಪ್ಪಿಕೊಳ್ಳದ ಸಮುದಾಯಗಳಿಗೆ ಎಲ್ಲ ಹಕ್ಕುಗಳಿಂದ ವಂಚಿತಗೊಳಿಸಲಾಯಿತು. ಅವರನ್ನು ಒಪ್ಪಿಕೊಂಡವರಿಗೆ ಎಲ್ಲ ಸವಲತ್ತುಗಳನ್ನು ನೀಡಲಾಯಿತು. ಬ್ರಿಟಿಷರ ಆಡಳಿತ ಮುಗಿದು 73 ವರ್ಷಗಳು ಕಳೆದರೂ ವಿನಾಯಿತಿ ಮುಂದುವರಿದಿದೆ ಎಂದು ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಚೇತನ್ ವೈ.ಕೆ. ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. 

ಬಂದೂಕು ಹೊಂದುವ ವಿನಾಯಿತಿ ನೀಡಿ 1963ರ ಜುಲೈ 6ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಈ ಹಿಂದೆ ಇದೇ ಅರ್ಜಿದಾರರು ಹೈಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು. ಆ ಅರ್ಜಿ ವಿಚಾರಣೆ ಬಾಕಿ ಇರುವಾಗಲೇ 2019ರ ಅಕ್ಟೋಬರ್‍ನಲ್ಲಿ ಕೇಂದ್ರ ಸರಕಾರ ಮತ್ತೊಂದು ಅಧಿಸೂಚನೆ ಹೊರಡಿಸಿ ವಿನಾಯಿತಿಯನ್ನು 2029ರ ಅ.31ರ ತನಕ ವಿಸ್ತರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News