ಶಾಲೆಯ ವರ್ಗಾವಣೆಯಿಂದ ಮೂಲಭೂತ ಹಕ್ಕು ಉಲ್ಲಂಘನೆ ಆಗುವುದಿಲ್ಲ: ಹೈಕೋರ್ಟ್

Update: 2021-09-22 13:27 GMT

ಬೆಂಗಳೂರು, ಸೆ.22: ಶಿಕ್ಷಣ ಪಡೆಯುವುದು ಮೂಲಭೂತ ಹಕ್ಕಾಗಿದೆ. ಶಾಲೆಯ ವರ್ಗಾವಣೆಯಿಂದ ಮೂಲಭೂತ ಹಕ್ಕು ಉಲ್ಲಂಘನೆಯಾಗುತ್ತದೆ ಎಂಬ ವಾದವನ್ನು ಒಪ್ಪಲಾಗದು ಎಂದಿರುವ ಹೈಕೋರ್ಟ್, ಮೈಸೂರು ನಗರದ ಎನ್‍ಟಿಎಂ ಕನ್ನಡ ಶಾಲೆಯ ವರ್ಗಾವಣೆಯನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. 

ಎನ್‍ಟಿಎಂ ಶಾಲೆಯ ಜಾಗವನ್ನು ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರಿಸಲು 2013ರ ಜ.9ರಂದು ಹೊರಡಿಸಿರುವ ಆದೇಶವನ್ನು ಜಾರಿಗೆ ತರುವಂತೆ ಮೈಸೂರು ಡಿಸಿಗೆ ಸೂಚಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು 2020ರ ನ.19ರಂದು ಪತ್ರ ಬರೆದಿದ್ದರು. 

ಇದನ್ನು ಪ್ರಶ್ನಿಸಿದ್ದ ಶಾಲೆಯ 22 ವಿದ್ಯಾರ್ಥಿಗಳು, ಶಾಲೆ ವರ್ಗಾವಣೆಯಿಂದ ಶಿಕ್ಷಣ ಪಡೆಯುವ ತಮ್ಮ ಮೂಲಭೂತ ಹಕ್ಕು ಉಲ್ಲಂಘನೆಯಾಗುತ್ತದೆ. ಹೀಗಾಗಿ, ವರ್ಗಾವಣೆ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿದ್ದರು. ಆದರೆ, ನ್ಯಾಯಪೀಠವು ಶಾಲೆಯ ಸ್ಥಳಾಂತರದಿಂದ ಮೂಲಭೂತ ಹಕ್ಕು ಉಲ್ಲಂಘನೆಯಾಗುತ್ತದೆ ಎಂಬ ಅರ್ಜಿದಾರರ ವಾದವನ್ನು ಒಪ್ಪಲಾಗದು. ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಬೇಕು ಎನ್ನುವುದು ಮೂಲಭೂತ ಹಕ್ಕು ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿದೆ.

ಸ್ವಾಮಿ ವಿವೇಕಾನಂದರು 1892ರಲ್ಲಿ ಮೊದಲ ಬಾರಿಗೆ ಮೈಸೂರಿಗೆ ಭೇಟಿ ನೀಡಿದ್ದಾಗ ನಿರಂಜನಮಠದಲ್ಲಿ ಉಳಿದುಕೊಂಡಿದ್ದರು. ನಂತರ ಆ ಜಾಗವನ್ನು ಮೈಸೂರು ಮಹಾನಗರ ಪಾಲಿಕೆ, ರಾಮಕೃಷ್ಣ ಮಠಕ್ಕೆ ಹಸ್ತಾಂತರ ಮಾಡಿತ್ತು. ಅಂದಾಜು 25 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ವಾಮಿ ವಿವೇಕಾನಂದ ಸ್ಮಾರಕ ಯುವ ಸಾಂಸ್ಕøತಿಕ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಲಾಗಿತ್ತು. ಅದಕ್ಕಾಗಿ ಸ್ಮಾರಕಕ್ಕೆ ಹೊಂದಿಕೊಂಡಿರುವ ಶಿಕ್ಷಣ ಇಲಾಖೆಗೆ ಸೇರಿದ ಜಾಗವನ್ನು ರಾಮಕೃಷ್ಣ ಮಠಕ್ಕೆ ಹಸ್ತಾಂತರಿಸಲು ಹಾಗೂ ಎನ್‍ಟಿಎಂ ಶಾಲೆಯನ್ನು ಹತ್ತಿರದ ದೇವರಾಜು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದಿಗೆ ವಿಲೀನಗೊಳಿಸಲು 2013ರ ಜ.9ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶಿಸಿದ್ದರು. ಅದೇ ವರ್ಷ ಮಾ.15ರಂದು ಜಾಗವನ್ನು ಮಠಕ್ಕೆ ಹಸ್ತಾಂತರಿಸಲಾಗಿತ್ತು. ಇದನ್ನು ಪ್ರಶ್ನಿಸಿ 2013ರಲ್ಲಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿತ್ತು.

ಆ ಬಳಿಕವೂ ಹಲವು ಬಾರಿ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಅಂತಿಮವಾಗಿ 2020ರ ನವೆಂಬರ್ 19ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು 2013ರ ಆದೇಶ ಜಾರಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಇದನ್ನು ವಿದ್ಯಾರ್ಥಿಗಳು ಹೈಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News