ಉರ್ದು ಪತ್ರಿಕೆಯ ವರದಿಗಾರನ ಮೇಲೆ ಹಲ್ಲೆ ಪ್ರಕರಣ:ವಿಧಾನಸಭೆಯಲ್ಲಿ ಪ್ರತಿಧ್ವನಿ,ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

Update: 2021-09-22 13:44 GMT

ಬೆಂಗಳೂರು, ಸೆ. 22: `ಮೈಸೂರಿನ ದೇಗುಲ ತೆರವು ವಿರೋಧಿಸಿ ಹಿಂದೂ ಜಾಗರಣ ವೇದಿಕೆ ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ವರದಿ ಮಾಡಲು ತೆರಳಿದ್ದ ಉರ್ದು ಪತ್ರಿಕೆಯ ಮೊಹಮ್ಮದ್ ಸಪ್ದರ್ ಖೈಸರ್ ಮೇಲೆ ವಿನಾಕಾರಣ ಹಲ್ಲೆ ನಡೆಸಿದ ತಪ್ಪಿತಸ್ಥರ ವಿರುದ್ಧ ಕೂಡಲೇ ಮೊಕದ್ದಮೆ ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಬುಧವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ತನ್ವೀರ್ ಸೇಠ್ ಪ್ರಸ್ತಾಪಿಸಿದ ವಿಷಯಕ್ಕೆ ಧ್ವನಿಗೂಡಿಸಿದ ಅವರು, `ಅನ್ಯಧರ್ಮದ ವ್ಯಕ್ತಿ ಎಂಬ ಕಾರಣಕ್ಕೆ ಹಿಂದೂ ಜಾಗರಣ ವೇದಿಕೆಯವರು ಮನಸೋ ಇಚ್ಛೆ ಥಳಿಸಿದ್ದು, ಈವರೆಗೂ ಪೊಲೀಸರು ದೂರು ದಾಖಲಿಸಿಲ್ಲ' ಎಂದು ಆರೋಪಿಸಿದರು.

ಪತ್ರಿಕಾ ವರದಿಗಾರನ ಮೇಲೆ ಹಲ್ಲೆ ನಡೆಸುವುದು ಗೂಂಡಾಗಿರಿ. ಪತ್ರಿಕೆಯವರ ಮೇಲೆ ಹಲ್ಲೆ ಸಹಿಸಲು ಸಾಧ್ಯವಿಲ್ಲ. ಸೆ.16ಕ್ಕೆ ವರದಿಗೆ ತೆರಳಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದು ಪೊಲೀಸರು ಈವರೆಗೂ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿ. ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಸದಸ್ಯ ತನ್ವೀರ್ ಸೇಠ್, `ಉರ್ದು ಪತ್ರಿಕೆಯ ವರದಿಗಾರನ ಮೇಲೆ ಹಲ್ಲೆ ನಡೆಸಿರುವುದು ಪತ್ರಿಕಾ ಸ್ವಾತಂತ್ರ್ಯದ ಮೇಲೆ ಹಲ್ಲೆ. ಪ್ರತಿಭಟನಾಕಾರರಿಗೆ ಸಂದೇಶವಿದ್ದರೆ ಆತನನ್ನು ಪೊಲೀಸರಿಗೆ ಒಪ್ಪಿಸಬಹುದಿತ್ತು. ಆದರೆ, ಏಕಾಏಕಿ ಹಲ್ಲೆ ನಡೆಸಿರುವುದು ಆತಂಕಕಾರಿ. ಈ ಹಲ್ಲೆ ಪ್ರಕರಣಕ್ಕೆ ಕಿಡಿಗೇಡಿಗಳು ಕೋಮುಬಣ್ಣ ನೀಡಿದ್ದರೆ ಪರಿಸ್ಥಿತಿ ಕೈಮೀರಿ ಕೋಮುಗಲಭೆ ಆಗುವುದರಲ್ಲಿ ಸಂದೇಹವೇ ಇರಲಿಲ್ಲ. ಹೀಗಾಗಿ ಹಲ್ಲೆ ನಡೆಸಿದ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು' ಎಂದು ಒತ್ತಾಯಿಸಿದರು. `ಪೊಲೀಸರ ಸಮ್ಮುಖದಲ್ಲಿ ಪತ್ರಕರ್ತನ ಮೇಲೆ ಹಲ್ಲೆ ನಡೆದಿದ್ದು, ಕಾನೂನು ರಕ್ಷಿಸುವವರೇ ಮೂಕಪ್ರೇಕ್ಷಕರಾದರೆ ಜನರನ್ನು ಯಾರು ರಕ್ಷಣೆ ಮಾಡಬೇಕೆಂದು ಡಿ.ಕೆ.ಶಿವಕುಮಾರ್ ಫೋಟೋಗಳನ್ನು ಪ್ರದರ್ಶಿಸಿ ಪ್ರಶ್ನಿಸಿದರು.

ಬಳಿಕ ಉತ್ತರ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, `ಪತ್ರಕರ್ತನ ಮೇಲೆ ಹಲ್ಲೆ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಲಿದ್ದು, ಕೂಡಲೇ ಮೈಸೂರಿನಿಂದ ವರದಿ ತರಿಸಿಕೊಂಡು ಹಲ್ಲೆ ನಡೆಸಿದ ಅಪರಾಧಿಗಳ ವಿರುದ್ಧ ಕಾನೂನು ಅನ್ವಯ ಕ್ರಮ ಜರುಗಿಸಲಾಗುವುದು' ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News