ರಾಯಚೂರು ಬಸ್ಸುಗಳನ್ನು ನೋಡಿದರೆ ಯಾವ ಜನರೂ ಕೂರಲ್ಲ: ಕಾಂಗ್ರೆಸ್ ಶಾಸಕ ಬಸವನಗೌಡ ದದ್ದಲ್

Update: 2021-09-22 14:04 GMT

ಬೆಂಗಳೂರು, ಸೆ. 22: `ರಾಯಚೂರು ಸಾರಿಗೆ ಘಟಕದ ಬಸ್ಸುಗಳನ್ನು ನೋಡಿದರೆ ಬೇರೆ ಯಾವ ಜನರು ಆ ಬಸ್ಸುಗಳಲ್ಲಿ ಕೂರುವುದಿಲ್ಲ' ಎಂದು ಕಾಂಗ್ರೆಸ್ ಸದಸ್ಯ ಬಸವನಗೌಡ ದದ್ದಲ ಅವರು ತಮ್ಮ ಭಾಗದ ಬಸ್ಸುಗಳ ಅವ್ಯವಸ್ಥೆಯ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು.

ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, `ಬೆಂಗಳೂರು ಮತ್ತು ಮೈಸೂರು ಈ ಭಾಗದಲ್ಲಿ ಉತ್ತಮ ಗುಣಮಟ್ಟದ ಬಸುಗಳು ಸಂಚರಿಸುತ್ತವೆ. ಆದರೆ, ನಮ್ಮ ರಾಯಚೂರು ಭಾಗ ಬಸ್ಸುಗಳ ಅತ್ಯಂತ ಕಳಪೆಯಾಗಿವೆ' ಎಂದರು.

ಸಚಿವರೇ ಉತ್ತರ ನೀಡಿದಂತೆ ರಾಯಚೂರು ಘಟಕ-2ರಲ್ಲಿ 105 ವಾಹನಗಳ ಪೈಕಿ 104 ವಾಹನಗಳು ಸರಾಸರಿ 7.54 ಲಕ್ಷಕ್ಕೂ ಹೆಚ್ಚು ಕಿ.ಮೀ.ಗಳಷ್ಟು ಕ್ರಮಿಸಿವೆ. ರಾಯಚೂರು ಘಟಕ -3ರಲ್ಲಿಯೂ 114 ವಾಹನಗಳ ಪೈಕಿ 111 ವಾಹನಗಳು ಸರಾಸರಿ 6.79ಲಕ್ಷಕ್ಕೂ ಹೆಚ್ಚು ಕಿ.ಮೀ.ಗಳಷ್ಟು ಸಂಚಾರ ಮಾಡಿವೆ. ಹೀಗಾಗಿ ಸುವ್ಯವಸ್ಥಿತವಾಗಿರುವ ವಾಹನಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರ ನೀಡಿದ ಸಾರಿಗೆ ಸಚಿವ ಬಿ.ಶ್ರೀರಾಮುಲು, `ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಆರಂಭವಾಗಿದ್ದು, ಮಕ್ಕಳ ಅನುಕೂಲಕ್ಕಾಗಿ ಕೋವಿಡ್ ಸಂದರ್ಭದಲ್ಲಿ ಸ್ಥಗಿತಗೊಳಿಸಲಾಗಿದ್ದ ಮಾರ್ಗಗಳಲ್ಲಿ ಸಂಚಾರ ಪುನಃ ಆರಂಭಿಸಲಾಗುವುದು' ಎಂದು ಭರವಸೆ ನೀಡಿದ್ದಾರೆ.

ಕೋವಿಡ್ ಕಾರಣಕ್ಕೆ ಪ್ರಸಕ್ತ ವರ್ಷದಲ್ಲಿ ಹೊಸ ವಾಹನಗಳ ಖರೀದಿ ಕುರಿತು ಕೊರೋನ ಸೋಂಕಿನ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಲಾಗುವುದು. ಹೊಸ ಬಸ್ಸುಗಳ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ರಾಯಚೂರು ಘಟಕಕ್ಕೆ ಹೊಸ ಬಸ್‍ಗಳನ್ನು ಒದಗಿಸಲಾಗುವುದು ಎಂದು ರಾಮುಲು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News