ಮೈಸೂರು ಅತ್ಯಾಚಾರ ಪ್ರಕರಣ; ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ಆಗುವ ರೀತಿ ಪ್ರಯತ್ನ: ಮುಖ್ಯಮಂತ್ರಿ ಬೊಮ್ಮಾಯಿ

Update: 2021-09-22 14:22 GMT
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಸೆ.22: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಮರಣದಂಡನೆಯ ಶಿಕ್ಷೆ ಸಿಗುವ ರೀತಿಯಲ್ಲಿ ಸರಕಾರ ಎಲ್ಲ ಪ್ರಯತ್ನಗಳನ್ನು ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬುಧವಾರ ವಿಧಾನಸಭೆಯಲ್ಲಿ ನಿಯಮ 69ರ ಮೇರೆಗೆ ನಡೆದ ಸಾರ್ವಜನಿಕ ಮಹತ್ವದ ಚರ್ಚೆಗೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಅವರು ಮಾತನಾಡಿದರು.

ಪೊಲೀಸರ ನೈತಿಕ ಸ್ಥೈರ್ಯವನ್ನು ನಾವು ಕಾಪಾಡಬೇಕಿದೆ. ಈ ಪ್ರಕರಣದ ತನಿಖೆಯಲ್ಲಿ ಯಾವುದೆ ಲೋಪದೋಷಗಳು ಆಗಿಲ್ಲ ಎಂಬುದಕ್ಕೆ ಇವತ್ತು ಆ ಸಂತ್ರಸ್ತೆ ಮ್ಯಾಜಿಸ್ಟ್ರೇಟ್ ಎದುರು ಹಾಜರಾಗಿ ಹೇಳಿಕೆ ನೀಡಿರುವುದೇ ಸಾಕ್ಷಿ. ಅಗತ್ಯ ತ್ವರಿತವಾಗಿ ಹಾಗೂ ಕಾಲಮಿತಿಯಲ್ಲಿ ಈ ಪ್ರಕರಣದ ಚಾರ್ಜ್‍ಶೀಟ್ ದಾಖಲಿಸಲಾಗುವುದು. ಪ್ರಾಸಿಕ್ಯೂಷನ್‍ಗಾಗಿ ವಿಶೇಷ ವಕೀಲರ ನೇಮಕ ಮಾಡುವುದರ ಜೊತೆಗೆ, ಆರೋಪಿಗಳಿಗೆ ಮರಣದಂಡನೆಯ ಶಿಕ್ಷೆಯ ಸಿಗುವಂತೆ ಮಾಡಲು ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಇದೇ ವೇಳೆ ಮೈಸೂರಿನಲ್ಲಿ ಚಿನ್ನದ ಅಂಗಡಿಯಲ್ಲಿ ನಡೆದ ಶೂಟೌಟ್‍ನಲ್ಲಿ ಮೃತಪಟ್ಟ ಯುವಕನ ಕುಟುಂಬಕ್ಕೆ ಪರಿಹಾರವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಪೊಲೀಸರ ತನಿಖೆಯಲ್ಲಿ ಲೋಪವಾಗಿ ಅತ್ಯಾಚಾರ ಪ್ರಕರಣದ ಆರೋಪಿಗಳು ತಪ್ಪಿಸಿಕೊಳ್ಳಬಾರದು. ನಿರ್ಭಯಾ ಪ್ರಕರಣದಲ್ಲಿ ಆರೋಪಿಗಳಿಗೆ ಯಾವ ರೀತಿ ಶಿಕ್ಷೆ ವಿಧಿಸಲಾಗಿತ್ತೋ, ಅದೇ ರೀತಿ ಇವರಿಗೆ ವಿಧಿಸುವಂತಾಗಬೇಕು. ಅಪರಾಧಿಗಳಿಗೆ ಪೊಲೀಸರು, ಕಾನೂನಿನ ಭಯ ಇರಬೇಕು. ಪೊಲೀಸರು ಈ ಪ್ರಕರಣದಲ್ಲಿ ಮಾಡಿರುವ ತಪ್ಪನ್ನು ತಿದ್ದಿಕೊಂಡು, ಆ ಸಂತ್ರಸ್ತೆಗೆ ತ್ವರಿತವಾಗಿ ನ್ಯಾಯ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News