ಹಾಸನ: ಮತಾಂತರ ಆರೋಪ; ಸಾರ್ವಜನಿಕರಿಂದ ತರಾಟೆ, ಪ್ರಕರಣ ದಾಖಲು

Update: 2021-09-22 14:27 GMT

ಹಾಸನ: ನಗರದ ಮಹಾರಾಜ ಉದ್ಯಾನವನದಲ್ಲಿ ಕರಪತ್ರ ನೀಡಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸುತ್ತಿದ್ದಾರೆ ಎಂದು  ಆರೋಪಿಸಿ ಓರ್ವ ಮಹಿಳೆ ಮತ್ತು ಯುವಕನ ವಿರುದ್ಧ ಸಾರ್ವಜನಿಕರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಹಿಳೆ ಓರ್ವರು ಪಾರ್ಕ್ ನಲ್ಲಿ ಸಂಚಾರ ಮಾಡುತ್ತಿದ್ದ ವಿದ್ಯಾರ್ಥಿಗಳು ಹಾಗು ವಿಶ್ರಾಂತಿಗೆ ಬರುವ ಸಾರ್ವಜನಿಕರಿಗೆ ಏಸು ಕ್ರಿಸ್ತನಿಗೆ ಸಂಬಂಧಿಸಿದ ಪುಸ್ತಕಗಳನ್ನು ಹಂಚಿದಲ್ಲದೇ ಹಿಂದೂ ದೇವರುಗಳನ್ನೆಲ್ಲಾ ಹಿಯಾಳಿಸಿ, ಏಸು ಕ್ರಿಸ್ತ ನಿಮಗೆ ಒಳ್ಳೆಯದನ್ನು ಮಾಡುತ್ತಾನೆ. ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿ ಎಂದು ಸಾರ್ವಜನಿಕರಿಗೆ ಹೇಳುತ್ತಿರುವುದಾಗಿ ಆರೋಪಿಸಿ ಕೆಲವು ಬಿಜೆಪಿ, ಸಂಘಪರಿವಾರದ ಕಾರ್ಯಕರ್ತರು ಹಾಗೂ ಸ್ಥಳೀಯ ಜನರು ಸೇರಿ ಮಹಿಳೆಯನ್ನು ಪ್ರಶ್ನೆ ಮಾಡಿದ್ದಾರೆ.

'ನಾವುಗಳು ಯಾವ ಮತಾಂತರವನ್ನು ಮಾಡಲು ಇಲ್ಲಿಗೆ ಬಂದಿರುವುದಿಲ್ಲ. ಏಸುವಿನ ಕಥೆಗಳನ್ನು ಮಾತ್ರ ಹೇಳುತ್ತಿದ್ದೇವೆ' ಎಂದು ಮಹಿಳೆ ಪ್ರತಿಕ್ರಿಯಿಸಿದ್ದಾರೆ. 

ನಗರ ಪೊಲೀಸ್ ಠಾಣೆ ಪಿಎಸ್ಐ ಸ್ಥಳಕ್ಕೆ ಆಗಮಿಸಿ ಮಹಿಳೆಯನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಗಿದೆ. ಸಂಘ ಪರಿವಾರದ ಕಾರ್ಯಕರ್ತರು ದೂರು ನೀಡಿದ ಹಿನ್ನಲೆಯಲ್ಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News