ವಾಣಿಜ್ಯ ಸಂಸ್ಥೆಗಳ ನೋಂದಣಿ ನವೀಕರಿಸದೆ 39.59 ಕೋಟಿ ರೂ.ನಷ್ಟ; ಸಿಎಜಿ ವರದಿಯಿಂದ ಬಹಿರಂಗ

Update: 2021-09-22 14:56 GMT

ಬೆಂಗಳೂರು, ಸೆ. 22: `ಕಾರ್ಮಿಕ ಇಲಾಖೆ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ನೋಂದಣಿ ನವೀಕರಿಸದಿರುವುದರಿಂದ 39.59 ಕೋಟಿ ರೂ.ವಸೂಲಿ ಕಡಿಮೆಯಾಗಿದೆ ಮತ್ತು ಬೆಂಗಳೂರು ವಿ.ವಿ.ಅಸಮರ್ಪಕ ಆರ್ಥಿಕ ನಿರ್ವಹಣೆಯಿಂದ 12.97 ಲಕ್ಷ ರೂ. ದುರುಪಯೋಗವಾಗಿದೆ' ಎಂಬ ಅಂಶವನ್ನು ಲೆಕ್ಕನಿಯಂತ್ರಣಕರು ಮತ್ತು ಮಹಾಲೆಕ್ಕಪರಿಶೋಧಕರ(ಸಿಎಜಿ) ವರದಿ ಬಹಿರಂಗಪಡಿಸಿದೆ.

ಬುಧವಾರ ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪರವಾಗಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಭಾರತದ ಲೆಕ್ಕನಿಯಂತ್ರಕರು ಮತ್ತು ಲೆಕ್ಕಪರಿಶೋಧಕರ ವರದಿಯನ್ನು ಮಂಡಿಸಿದರು. `ಪಿಂಚಣಿ ನಿಧಿಯ ನಿಯಮ ಮತ್ತು ಅಭಿವೃದ್ಧಿ ಪ್ರಾಧಿಕಾರದ ನಿಯಮಗಳನ್ನು ರಾಷ್ಟ್ರೀಯ ಪಿಂಚಣಿ ಪದ್ಧತಿಗೆ ಅನುಗುಣವಾಗಿ ಜಾರಿಗೊಳಿಸಿಲ್ಲ' ಎಂದು ಉಲ್ಲೇಖಿಸಿದೆ.

`ರಾಣಿಚೆನ್ನಮ್ಮ ವಿ.ವಿ. ನೀಡಿರುವ ಮಾಹಿತಿಯಂತೆ 2015ರ ಫೆಬ್ರವರಿಯಿಂದ 2016ರ ಸೆಪ್ಟೆಂಬರ್ ವರೆಗಿನ ಅವಧಿಯಲ್ಲಿ ನೌಕರರ ಮತ್ತು ಉದ್ಯೋಗದಾತರ ವಂತಿಗೆಯ ಹಣ 2.40 ಕೋಟಿ ರೂ.ಗಳನ್ನು ಹೂಡಿಕೆ ಮಾಡಿರಲಿಲ್ಲ. ಹಿಂದಿನ ವಂತಿಗೆಯೊಂದಿಗೆ ಹೂಡಿಕೆ ಮಾಡುವಲ್ಲಿ ವಿಳಂಬದಿಂದ ವಿ.ವಿಸಿಬ್ಬಂದಿಗೆ 29.62 ಲಕ್ಷ ರೂ.ನಷ್ಟ ಪರಿಣಿಮಿಸಿದೆ.

ಬೆಂಗಳೂರು ವಿ.ವಿ. 2006ರ ಎ.1ರ ನಂತರ ನೇಮಕಗೊಂಡ ನೌಕರರಿಗೆ ಎನ್‍ಪಿಎಸ್ ಅನ್ನು ಅಳವಡಿಸಲು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದೆ. ಅಲ್ಲದೆ, ಮಂಗಳೂರು ವಿ.ವಿ. ಯಾವುದೇ ಉತ್ತರ ನೀಡಿರುವುದಿಲ್ಲ. 2020ರಲ್ಲಿ ಮಾತ್ರ ನೌಕರರಿಗೆ ಹೂಡಿಕೆಯಿಂದ ನಷ್ಟ ಉಂಟಾಯಿತು. ಎಲ್‍ಐಸಿಯಿಂದ ಪಡೆದ ಲಾಭಾಂಶಗಳು ಎನ್‍ಎವಿ ಪ್ರಕಾರವಿರಲಿಲ್ಲವಾದುದರಿಂದ ಉತ್ತರವು ಸರಿಯಿರುವುದಿಲ್ಲ. ಅಲ್ಲದೆ, ಹೂಡಿಕೆಗಳು ಸರಕಾರದ ನಿರ್ದೇಶನಗಳಿಗೆ ವಿರುದ್ಧವಾಗಿದ್ದವು ಎಂದು ಸಿಎಜಿ ತಿಳಿಸಿದೆ.

ಪಶುಪಾಲನಾ ಮತ್ತು ಚನ್ನಪಟ್ಟಣದಲ್ಲಿ ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸರಕಾರದ ರಾಜಸ್ವವನ್ನು ಜಮೆ ಮಾಡದಿರುವುದರಿಂದ ಮತ್ತು ದಾಖಲೆಗಳಲ್ಲಿ ಕೈಚಳಕ ಮಾಡಿರುವುದರಿಂದ 1.38 ಲಕ್ಷ ರೂ.ದುರುಪಯೋಗವಾಗಿದೆ. ಆರೋಗ್ಯ ಎಂಜಿನಿಯರಿಂಗ್ ವಿಭಾಗದ ಮುಖ್ಯ ಎಂಜಿನಿಯರ್ ಅವರಿಂದ ವಿಳಂಬವಾಗಿ ಪೂರ್ಣಗೊಳಿಸಿದ ಕಾಮಗಾರಿಗಳ ಮೇಲೆ ಅತ್ಯಲ್ಪ ದಂಡವನ್ನು ವಿಧಿಸಲಾಗಿದೆ. ಇದು 14.63 ಕೋಟಿ ರೂ.ನಷ್ಟು ಲಿಕ್ವಿಡೇಟೆಡ್ ಡ್ಯಾಮೇಜಸ್ ಕಡಿಮೆ ವಿಧಿಸಿರುವುದಲ್ಲದೆ, ಗುತ್ತಿಗೆದಾರರಿಗೆ ಲಾಭವನ್ನುಂಟು ಮಾಡಲಾಗಿದೆ ಎಂದು ಸಿಎಜಿ ಹೇಳಿದೆ.

ನಗರದ ಪ್ರದೇಶದಲ್ಲಿದ್ದ 30 ಬಾರುಗಳು ಮತ್ತು ರೆಸ್ಟೋರೆಂಟುಗಳು 2014ರ ಮಾರ್ಚ್‍ನಿಂದ 2017ರ ಮಾರ್ಚ್ ಅವಧಿಯಲ್ಲಿ ಮಾಡಿದ್ದಂತಹ ಮದ್ಯ ಮಾರಾಟಗಳ ಮೇಲೆ ಕಡಿಮೆ ಪ್ರಮಾಣದಲ್ಲಿ ವಿಧಿಸಿದ ತೆರಿಗೆಯು ಬಡ್ಡಿ ಮತ್ತು ದಂಡವೂ ಸೇರಿ 6.15 ಕೋಟಿ ರೂ.ಆಗಿದೆ ಎಂದು ಸಿಎಜಿ ವರದಿಯಲ್ಲಿ ಹೇಳಿದೆ.

7.54 ಲಕ್ಷ ಕೋಟಿ ರೂ. ಮೊತ್ತದ ಒಟ್ಟು ಆಯವ್ಯಯ ವೆಚ್ಚಕ್ಕೆ ಪ್ರತಿಯಾಗಿ 2019-20ನೆ ಸಾಲಿನಲ್ಲಿ ಸಂಪನ್ಮೂಲಗಳ ಅನ್ವಯವು 5.03 ಲಕ್ಷ ಕೊಟಿ ರೂ.ಗಳಷ್ಟಿತ್ತು. ರಾಜ್ಯದ ಒಟ್ಟು ವೆಚ್ಚವು(ರಾಜಸ್ವ ವೆಚ್ಚ, ಬಂಡವಾಳ ವೆಚ್ಚ ಹಾಗೂ ಸಾಲ ಮತ್ತು ಮುಂಗಡಗಳು) 2015-16ರಿಂದ 2019-20ನೆ ಸಾಲಿನಲ್ಲಿ ಶೇ.55ರಷ್ಟು ಏರಿಕೆ ಆಗಿತ್ತು ಮತ್ತು ರಾಜಸ್ವ ವೆಚ್ಚವು ಇದೇ ಅವಧಿಯಲ್ಲಿ ಶೇ.49ರಷ್ಟು ಏರಿಕೆಯಾಗಿತ್ತು ಎಂಬ ಅಂಶವನ್ನು ಸಿಎಜಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News