ನಿಗಮ ಮಂಡಳಿಗಳಲ್ಲಿ ತೃತೀಯ ಲಿಂಗಿಗಳಿಗೆ ಮೀಸಲು ಕೋರಿಕೆ: ಸರಕಾರಕ್ಕೆ ಕೊನೆಯ ಅವಕಾಶ ನೀಡಿದ ಹೈಕೋರ್ಟ್

Update: 2021-09-22 15:51 GMT

ಬೆಂಗಳೂರು, ಸೆ.22: ಸರಕಾರಿ ಸ್ವಾಮ್ಯದ ನಿಗಮ ಮಂಡಳಿಗಳು, ಶಾಸನಬದ್ಧ ಪ್ರಾಧಿಕಾರಗಳಲ್ಲಿ ತೃತೀಯ ಲಿಂಗಿಗಳಿಗೆ ಶೇ.1ರಷ್ಟು ಸಮತಲ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಕೊನೆಯದಾಗಿ 4 ವಾರ ಕಾಲಾವಕಾಶ ನೀಡಿದೆ.

ಈ ಕುರಿತು ಲೈಂಗಿಕ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸಂಗಮ ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ಸಿ.ಶರ್ಮಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಾದಿಸಿದ ವಕೀಲರು, ಸರಕಾರದ ಎಲ್ಲ ಹುದ್ದೆಗಳ ನೇಮಕಾತಿ ವೇಳೆ ತೃತೀಯ ಲಿಂಗಿಗಳಿಗೆ ಎಲ್ಲ ವರ್ಗಗಳಲ್ಲಿ ಶೇ.1ರಷ್ಟು ಸಮತಲ ಮೀಸಲಾತಿ ಕಲ್ಪಿಸಲು ಕರ್ನಾಟಕ ನಾಗರಿಕ ಸೇವಾ ನೇಮಕಾತಿ ನಿಯಮ-1977ರ ನಿಯಮ 9ಕ್ಕೆ ತಿದ್ದುಪಡಿ ತಂದು 1(ಡಿ)ಯನ್ನು ಸೇರ್ಪಡೆಗೊಳಿಸಿ 2021ರ ಜು.6ರಂದು ಅಂತಿಮ ಅಧಿಸೂಚನೆ ಪ್ರಕಟಿಸಿದೆ.

ಸರಕಾರದ ಈ ತಿದ್ದುಪಡಿ ನಿಯಮ ಕೇವಲ ಸರಕಾರಿ ಹುದ್ದೆಗಳಿಗೆ ಮಾತ್ರ ಅನ್ವಯಿಸುತ್ತದೆ. ಸರಕಾರದ ಇತರೆ ಪ್ರಾಧಿಕಾರ ಹಾಗೂ ನಿಗಮ-ಮಂಡಳಿಗಳ ನೇಮಕಾತಿಯಲ್ಲಿ ಈ ತಿದ್ದುಪಡಿ ನಿಯಮವನ್ನು ಜಾರಿಗೆ ತರಲು ನಿರ್ದೇಶನ ನೀಡಬೇಕೆಂಬುದು ನಮ್ಮ ಮನವಿ. ಈ ನಿಟ್ಟಿನಲ್ಲಿ ಸರಕಾರಿ ಪ್ರಾಧಿಕಾರ, ನಿಗಮ-ಮಂಡಳಿಗಳಿಗೆ ಸಲಹೆ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಸರಕಾರಕ್ಕೆ ಆ.18ರಂದು ನಿರ್ದೇಶಿಸಿತ್ತು. ಆದರೆ, ಆದೇಶ ಪಾಲನೆಯಾಗಿಲ್ಲ ಎಂದು ಪೀಠದ ಗಮನಕ್ಕೆ ತಂದರು.

ವಾದ ಪರಿಗಣಿಸಿದ ಪೀಠ, 2021ರ ಆ.18ರಂದು ನ್ಯಾಯಾಲಯ ಹೊರಡಿಸಿರುವ ನಿರ್ದೇಶನವನ್ನು ಪಾಲಿಸಲು ರಾಜ್ಯ ಸರಕಾರಕ್ಕೆ ಕೊನೆಯದಾಗಿ ನಾಲ್ಕು ವಾರ ಕಾಲಾವಕಾಶ ನೀಡಲಾಗುತ್ತಿದೆ ಎಂದು ತಿಳಿಸಿ ವಿಚಾರಣೆಯನ್ನು ನ.17ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News