ಮೀಸಲಾತಿಗೆ ಆಗ್ರಹಿಸಿ ಸೆ.24ರಂದು ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್: ಎ.ಬಿ.ಪಾಟೀಲ

Update: 2021-09-22 15:56 GMT
ಬಸವಜಯ ಮೃತ್ಯುಂಜಯ ಸ್ವಾಮೀಜಿ 

ಬೆಳಗಾವಿ, ಸೆ.22: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಸರಕಾರಕ್ಕೆ ಹಕ್ಕೊತ್ತಾಯ ಮಂಡಿಸುವುದಕ್ಕಾಗಿ ಸೆ.24ರಂದು ಬೆಳಗ್ಗೆ 10.30ಕ್ಕೆ ನಗರದ ಗಾಂಧಿ ಭವನದಲ್ಲಿ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಆಯೋಜಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಎ.ಬಿ. ಪಾಟೀಲ ತಿಳಿಸಿದ್ದಾರೆ.

ಬುಧವಾರ ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಪಂಚಾಯತ್ ನಡೆಯಲಿದ್ದು, ಸರಕಾರದ ಗಮನ ಸೆಳೆಯುವುದಕ್ಕಾಗಿ ಕೈಗೊಂಡಿರುವ 4ನೆ ಹಂತದ ಚಳವಳಿ ಇದಾಗಿದೆ ಎಂದು ಹೇಳಿದರು.

ಸೆ.24ರ ಬೆಳಗ್ಗೆ ಆರ್‍ಟಿಒ ಸಮೀಪದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮೆರವಣಿಗೆ ಆರಂಭವಾಗಲಿದೆ. ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸ್ವಾಮೀಜಿ ಅವರನ್ನು ಮೆರವಣಿಗೆಯಲ್ಲಿ ಬರ ಮಾಡಿಕೊಳ್ಳಲಾಗುವುದು ಎಂದರು. 

ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ 2ಎ ಮೀಸಲಾತಿ ಸಿಗುವವರೆಗೂ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಸಲಿದ್ದೇವೆ. ಮುರುಗೇಶ ನಿರಾಣಿ ಸೇರಿದಂತೆ ಸರಕಾರದ ಭಾಗವಾಗಿರುವ ನಮ್ಮ ಸಮಾಜದ ಸಚಿವರು ಕೂಡ ಹೋರಾಟದಲ್ಲಿ ಸಕ್ರಿಯವಾಗಿದ್ದಾರೆ ಎಂದು ತಿಳಿಸಿದರು.
ವಕೀಲ ದಿನೇಶ ಪಾಟೀಲ ಮಾತನಾಡಿ, ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ಆರಂಭಗೊಂಡಿರುವ ಪಂಚಾಯತ್ ರಾಜ್ಯದಾದ್ಯಂತ ನಡೆದು, ಅ.1ರಂದು ಬೆಂಗಳೂರು ತಲುಪಲಿದೆ. ಪಕ್ಷಾತೀತವಾದ ಹೋರಾಟವಿದು ಎಂದರು.

ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ಪಾಟೀಲ, ಮುಖಂಡರಾದ ರುದ್ರಣ್ಣ ಚಂದರಗಿ, ರೋಹಿಣಿ ಪಾಟೀಲ, ಶಂಕರ ಮಾಡಲಗಿ, ನಿಂಗಪ್ಪ ಪಿರೋಜಿ, ಸುರೇಶ ಖಿರಾಯಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News