ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ಅಗತ್ಯವಿಲ್ಲ: ಮುಖ್ಯಮಂತ್ರಿಗೆ ಕ್ರೈಸ್ತ ಧರ್ಮಗುರುಗಳ ಮನವಿ

Update: 2021-09-22 16:39 GMT

ಬೆಂಗಳೂರು, ಸೆ.22 ರಾಜ್ಯದಲ್ಲಿ ಯಾರೊಬ್ಬರೂ ಬಲವಂತದ ಮತಾಂತರ ಮಾಡುತ್ತಿಲ್ಲ. ಆದುದರಿಂದ, ಪ್ರತ್ಯೇಕವಾಗಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ಅಗತ್ಯವಿಲ್ಲ ಎಂದು ಬೆಂಗಳೂರಿನ ಆರ್ಚ್ ಬಿಷಪ್ ಡಾ.ಪೀಟರ್ ಮಚಾಡೋ ನೇತೃತ್ವದ ಧರ್ಮಗುರುಗಳ ನಿಯೋಗ ರಾಜ್ಯ ಸರಕಾರಕ್ಕೆ ತಿಳಿಸಿದೆ.

ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದ ಕ್ರೈಸ್ತ ಧರ್ಮಗುರುಗಳ ನಿಯೋಗವು, ನಿನ್ನೆ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್, ಕ್ರೈಸ್ತರು ಬಲವಂತದ ಮತಾಂತರ ಮಾಡುತ್ತಿದ್ದಾರೆ ಎಂದು ಮಾಡಿದ ಆರೋಪದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ನಮಲ್ಲಿ ಯಾರೊಬ್ಬರೂ ಬಲವಂತದ ಮತಾಂತರ ಮಾಡುತ್ತಿಲ್ಲ. ನಾವು ನಡೆಸುತ್ತಿರುವ ಸಾವಿರಾರು ಶಿಕ್ಷಣ ಸಂಸ್ಥೆಗಳಲ್ಲಿ ಲಕ್ಷಾಂತರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಯಾವ ಮಕ್ಕಳು ಮತಾಂತರ ಆಗಿರುವ ನಿರ್ದಶನವಿಲ್ಲ. ಬಲವಂತದ ಮತಾಂತರ ಮಾಡಲಾಗುತ್ತಿದೆ ಎಂದು ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಧರ್ಮಗುರುಗಳು ಮುಖ್ಯಮಂತ್ರಿಗೆ ತಿಳಿಸಿದರು.

ಮುಖ್ಯಮಂತ್ರಿಯನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಪೀಟರ್ ಮಚಾಡೋ, ರಾಜ್ಯದಲ್ಲಿ ಪ್ರತಿಯೊಬ್ಬ ಧರ್ಮಾಧ್ಯಕ್ಷರ ವ್ಯಾಪ್ತಿಯಲ್ಲಿ ನೂರಾರು ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳಿವೆ. ಲಕ್ಷಾಂತರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಯಾವುದೋ ಒಂದು ಪ್ರದೇಶದಲ್ಲಿ ನಡೆದ ಘಟನೆಯನ್ನು ಮುಂದಿಟ್ಟುಕೊಂಡು ಇಡೀ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಸರಿಯಲ್ಲ ಎಂದರು.

ಧರ್ಮಗುರುಗಳಾದ ನಾವು ಯಾರೊಬ್ಬರಿಗೂ ಮತಾಂತರ ಮಾಡಲು ಹೇಳಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮ್ಮ ಅಭಿಪ್ರಾಯವನ್ನು ಕೇಳಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News