ಮೈಸೂರು ಅತ್ಯಾಚಾರ ಪ್ರಕರಣ: ಫಾಸ್ಟ್ ಟ್ರ್ಯಾಕ್ ಕೋರ್ಟ್ ಒದಗಿಸುವಂತೆ ಮುಖ್ಯ ನ್ಯಾಯಮೂರ್ತಿಗೆ ಮನವಿ: ಆರಗ ಜ್ಞಾನೇಂದ್ರ

Update: 2021-09-22 16:10 GMT

ಬೆಂಗಳೂರು, ಸೆ.22: ಮೈಸೂರಿನಲ್ಲಿ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಫಾಸ್ಟ್ ಟ್ರ್ಯಾಕ್ ಕೋರ್ಟ್ ಒದಗಿಸುವಂತೆ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಗೆ ಮನವಿ ಸಲ್ಲಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಬುಧವಾರ ವಿಧಾನಸಭೆಯಲ್ಲಿ ನಿಯಮ 69ರ ಮೇರೆಗೆ ನಡೆದ ಸಾರ್ವಜನಿಕ ಮಹತ್ವದ ಚರ್ಚೆಗೆ ಸಂಬಂಧಿಸಿದಂತೆ ಸರಕಾರದ ಪರವಾಗಿ ಉತ್ತರ ನೀಡಿದ ಅವರು, ಈ ಪ್ರಕರಣವನ್ನು ಮುಚ್ಚಿಹಾಕಲು ಯಾವ ಪ್ರಯತ್ನವು ನಡೆದಿಲ್ಲ. ವಿರೋಧ ಪಕ್ಷದ ನಾಯಕರ ಅನುಮಾನ ನಿರಾಧಾರವಾದದ್ದು ಎಂದರು.

ಪೊಲೀಸರು 80 ಗಂಟೆಯೊಳಗೆ ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದಾರೆ. ಆದುದರಿಂದ, ಪೊಲೀಸರ ತಂಡಕ್ಕೆ 5 ಲಕ್ಷ ರೂ.ಬಹುಮಾನವನ್ನು ನೀಡಲಾಗುವುದು. ಜೊತೆಗೆ, ಮೈಸೂರಿನಲ್ಲಿ ಶೂಟೌಟ್‍ನಲ್ಲಿ ಮೃತಪಟ್ಟ ಯುವಕನ ಕುಟುಂಬಕ್ಕೂ ಪರಿಹಾರ ನೀಡಲಾಗುವುದು ಎಂದು ಅವರು ಹೇಳಿದರು.

ಯಾದಗಿರಿಯಲ್ಲಿ ನಡೆದ ಘಟನೆ ಕುರಿತು ಪತ್ರಿಕೆಯೊಂದರಲ್ಲಿ ಸುದ್ದಿ ನೋಡಿದ ಕೂಡಲೆ ನಾನು ಡಿಐಜಿ ಅವರೊಂದಿಗೆ ಮಾತನಾಡಿದೆ. ಕೇವಲ ಎರಡೇ ಗಂಟೆಯಲ್ಲಿ ಪ್ರಕರಣದ ಆರೋಪಿಗಳನ್ನು ಬಂಧಿಸಲಾಯಿತು. ಈ ಘಟನೆ 8-9 ತಿಂಗಳು ಹಳೆಯದ್ದು. ಯಾರೊಬ್ಬರೂ ದೂರು ನೀಡದೆ ಇದ್ದಿದ್ದರಿಂದ ಪ್ರಕರಣ ಬೆಳಕಿಗೆ ಬಂದಿರಲಿಲ್ಲ. ತುಮಕೂರಿನಲ್ಲಿ ನಡೆದ ಘಟನೆ ಕುರಿತು ಈವರೆಗೆ ಆರೋಪಿಗಳ ಸುಳಿವು ಸಿಕ್ಕಿಲ. ಐದು ತಂಡಗಳನ್ನು ರಚಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದರು.

ನನ್ನದು ಕಟುಕ ಹೃದಯ ಅಲ್ಲ. ನೆಲದಿಂದ ಮೇಲೆ ಬಂದವನು ನಾನು. ಈ ವ್ಯವಸ್ಥೆಯನ್ನು ಹಾಳಾಗಲು ಬಿಡಲ್ಲ, ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಇಡೀ ದೇಶದಲ್ಲಿ ಮೈಸೂರು ನಗರದಲ್ಲಿ ಪೊಲೀಸ್ ವ್ಯವಸ್ಥೆ ಉತ್ತಮವಾಗಿದೆ. ದೇಶದಲ್ಲಿ ಒಂದು ಲಕ್ಷ ಜನಸಂಖ್ಯೆಗೆ 198 ಪೊಲೀಸರು ಇದ್ದರೆ, ನಮ್ಮ ರಾಜ್ಯದಲ್ಲಿ ಒಂದು ಲಕ್ಷ ಜನಸಂಖ್ಯೆಗೆ 182 ಮಂದಿ ಪೊಲೀಸರಿದ್ದಾರೆ. ಮೈಸೂರು ನಗರದಲ್ಲಿ ಒಂದು ಲಕ್ಷ ಜನಸಂಖ್ಯೆಗೆ 317 ಜನ ಪೊಲೀಸರಿದ್ದಾರೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

ನಿರ್ಭಯಾ ಪ್ರಕರಣದ ನಂತರ ರಚನೆಯಾದ ನ್ಯಾ.ಜೆ.ಎಸ್.ವರ್ಮಾ ಸಮಿತಿಯ ಶಿಫಾರಸ್ಸಿನಂತೆ ಪೊಲೀಸರು ಸಂತ್ರಸ್ತೆಯನ್ನು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿಲ್ಲ. ಯುವಕನ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲು ಮಾಡಿಲ್ಲ. ಆಸ್ಪತ್ರೆಯಿಂದ ಎಂ.ಎಲ್.ಸಿ. ಮಾಹಿತಿ ರಾತ್ರಿ 11.30ಕ್ಕೆ ತಲುಪಿದ್ದರೂ ಪೊಲೀಸರು ಎಫ್‍ಐಆರ್ ದಾಖಲು ಮಾಡಿದ್ದು ಮಾರನೆ ದಿನ 12 ಗಂಟೆಗೆ. ಈ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿಲ್ಲ. ಮೇಲ್ನೋಟಕ್ಕೆ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ.

-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News