ಮೈಸೂರು ಅತ್ಯಾಚಾರ ಪ್ರಕರಣ: ತನಿಖೆಯಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲ; ಸಿದ್ದರಾಮಯ್ಯ

Update: 2021-09-22 16:15 GMT

ಬೆಂಗಳೂರು, ಸೆ.22: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣದ ತನಿಖೆಯಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ಪೊಲೀಸರ ನಿರ್ಲಕ್ಷ ಧೋರಣೆ ಮತ್ತು ಗೃಹಸಚಿವರ ಬೇಜವಾಬ್ದಾರಿ ಹೇಳಿಕೆಗಳಿಂದಾಗಿ ತನಿಖೆ ಸಂಪೂರ್ಣವಾಗಿ ಹಾದಿ ತಪ್ಪಿದೆ. ಈಗಲಾದರೂ ರಾಜ್ಯ ಸರಕಾರ ಎಚ್ಚೆತ್ತು ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಬುಧವಾರ ವಿಧಾನಸಭೆಯಲ್ಲಿ ನಿಯಮ 69ರಡಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅತ್ಯಾಚಾರ ಪ್ರಕರಣದ ಬಗ್ಗೆ ಪೊಲೀಸರು 60 ದಿನಗಳೊಳಗೆ ಆರೋಪ ಪಟ್ಟಿ ಸಲ್ಲಿಸಬೇಕು, ಐದು ತಿಂಗಳೊಳಗೆ ವಿಚಾರಣೆ ನಡೆದು ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ರಾಜ್ಯ ಸರಕಾರದ್ದಾಗಿದೆ. ಇಂತಹಾ ಪ್ರಕರಣಗಳು ಮುಂದೆ ರಾಜ್ಯದಲ್ಲಿ ನಡೆಯದಂತೆ ಸಂಪೂರ್ಣ ಹೊಣೆಯನ್ನು ಗೃಹ ಸಚಿವರು ಹೊರಬೇಕು ಎಂದರು. 

ಅತ್ಯಾಚಾರವನ್ನು ವೈದ್ಯೆ ದೃಢಪಡಿಸಿಕೊಂಡು, ಅದನ್ನು ಮೆಡಿಕೊ ಲೀಗಲ್ ಕೇಸ್ ಎಂದು ಪರಿಗಣಿಸಿ ರಾತ್ರಿ 10 ಗಂಟೆಗೆ ಪೆÇಲೀಸರಿಗೆ ವರದಿ ಕಳುಹಿಸಿದ್ದಾರೆ. ಮರುದಿನ ಮಧ್ಯಾಹ್ನ 12 ಗಂಟೆಗೆ ಅಂದರೆ 14 ಗಂಟೆಗಳ ನಂತರ ಎಫ್.ಐ.ಆರ್ ದಾಖಲಾಗಿದೆ. ಯಾಕೆ ಈ ವಿಳಂಬ? ನ್ಯಾ.ಜೆ.ಎಸ್.ವರ್ಮ ನೇತೃತ್ವದ ಸಮಿತಿ ನೀಡಿದ್ದ ವರದಿಯ ಯಾವ ಅಂಶಗಳನ್ನು ಮೈಸೂರು ಪೊಲೀಸರು ಪಾಲಿಸಿಲ್ಲ. ನಿರ್ಭಯಾ ಪ್ರಕರಣದಷ್ಟೇ ಗಂಭೀರವಾದ ಘಟನೆಯನ್ನು ಪೊಲೀಸರು ಅತ್ಯಂತ ಲಘುವಾಗಿ ಪರಿಗಣಿಸಿದ್ದರು ಎಂಬುದು ಮೇಲ್ನೋಟಕ್ಕೆ ತಿಳಿದುಬರುತ್ತಿದೆ ಎಂದು ಅವರು ಕಿಡಿಗಾರಿದರು.

ಅತ್ಯಾಚಾರಕ್ಕೊಳಗಾದ ಯುವತಿ ಮತ್ತು ಹಲ್ಲೆಗೊಳಗಾದ ಯುವಕನನ್ನು ಪೊಲೀಸರು ಸರಕಾರಿ ಆಸ್ಪತ್ರೆಗೆ ದಾಖಲಿಸುವ ಬದಲು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಯಾಕೆ? ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ, ಕಾನೂನು ಸಲಹೆ ಹಾಗೂ ಆತ್ಮಸ್ಥೈರ್ಯ ನೀಡಲು ಸಾಂತ್ವನ ಕೇಂದ್ರಗಳಿರುವುದು ಗೊತ್ತಿದ್ದರೂ ಪೊಲೀಸರು ನಿರ್ಲಕ್ಷಿಸಿದ್ದು ಯಾಕೆ? ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿ 27ನೇ ತಾರೀಖು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹೋಗಿದ್ದಾಳೆ. ಪೊಲೀಸರು ಘಟನೆಯ ಬಗ್ಗೆ ಯುವತಿಯ ಹೇಳಿಕೆಯನ್ನೇ ದಾಖಲಿಸಿಲ್ಲ. ಹೀಗಿರುವಾಗ ಪ್ರಕರಣ ನ್ಯಾಯಾಲಯದಲ್ಲಿ ಗಟ್ಟಿಯಾಗಿ ನಿಲ್ಲುವುದು ಹೇಗೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. 

ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಎಫ್.ಐ.ಆರ್ ದಾಖಲಾಗಿದೆ, ಆದರೆ ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನ ಪ್ರಕರಣದಲ್ಲಿ ಎಫ್.ಐ.ಆರ್ ದಾಖಲಿಸಿಲ್ಲ. ಹಲ್ಲೆ ಕೂಡ ಕ್ರಿಮಿನಲ್ ಪ್ರಕರಣ, ಆತನಿಗೂ ನ್ಯಾಯ ಕೊಡಿಸಬೇಕಾದುದ್ದು ಪೊಲೀಸರ ಕರ್ತವ್ಯ ಅಲ್ಲವೇ? ಅತ್ಯಾಚಾರ ನಡೆದ ನಂತರ ಆ.26 ರ ರಾತ್ರಿ ಮೈಸೂರಿಗೆ ಹೋಗಿದ್ದ ಗೃಹ ಸಚಿವರು ತಕ್ಷಣಕ್ಕೆ ಸ್ಥಳಕ್ಕೆ ಧಾವಿಸಿಲ್ಲ. ಮರುದಿನ ಬೆಳಗ್ಗೆ ಪೊಲೀಸ್ ಅಕಾಡೆಮಿಗೆ ಮತ್ತು ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ, ಸಂಜೆ ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದರು. ಇದು  ಗೃಹ ಸಚಿವರು ಈ ಪ್ರಕರಣಕ್ಕೆ ಕೊಟ್ಟ ಮಹತ್ವ ಎಂದು ಅವರು ಟೀಕಿಸಿದರು. 

ಹಲ್ಲೆ ಮಾಡಿದವರ ಬಗ್ಗೆ ಯುವಕ ಪೊಲೀಸರಿಗೆ ಸಾಕಷ್ಟು ಮಾಹಿತಿ ನೀಡಿದ್ದ, ಕೃತ್ಯ ಎಸಗಿದವರನ್ನು ಪೊಲೀಸರು ಬಂಧಿಸಿದ ನಂತರ ಅವರನ್ನು ಗುರುತಿಸಲಿಕ್ಕಾಗಿ  ಯುವಕ ಮತ್ತು ಯುವತಿಯ ಎದುರಿಗೆ ಆರೋಪಿಗಳ ಪೆರೇಡ್ ನಡೆಸಲಾಗಿದೆಯೇ? ಈ ಅತ್ಯಾಚಾರ ಪ್ರಕರಣದ ಬಗ್ಗೆ ವರದಿ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿಯನ್ನು ರಚನೆ ಮಾಡಿದ್ದರು. ಈ ಸಮಿತಿ ಪಕ್ಷಕ್ಕೆ ವರದಿಯನ್ನು ನೀಡಿದೆ. ವರದಿಯಲ್ಲಿ ಪೊಲೀಸ್ ಇಲಾಖೆಯ ಕರ್ತವ್ಯ ಲೋಪದ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದರು.

ಅತ್ಯಾಚಾರ ನಡೆದ ಸ್ಥಳ ಅತ್ಯಂತ ನಿರ್ಜನ ಪ್ರದೇಶವೂ ಅಲ್ಲ ಮತ್ತು ದಟ್ಟವಾದ ಅರಣ್ಯವೂ ಅಲ್ಲ. ವರ್ತುಲ ರಸ್ತೆಗೆ ಕೂಗಳತೆ ದೂರದಲ್ಲಿರುವ ಸ್ಥಳ. ಇಂತಹಾ ಜನಸಂಚಾರದ ಸ್ಥಳದಲ್ಲಿ ಪೊಲೀಸ್ ಗಸ್ತು ಹಾಕದೆ ಇರುವುದು ಘಟನೆಗೆ ನೇರ ಕಾರಣ. ಅತ್ಯಾಚಾರ ನಡೆದಿದ್ದ ಪ್ರದೇಶದಲ್ಲಿ ಹಿಂದೆಯೂ ಇಂತಹಾ ಸಾಕಷ್ಟು ಘಟನೆಗಳು ನಡೆದಿವೆ ಎಂದು ಪೊಲೀಸ್ ಕಮಿಷನರ್ ನನಗೆ ತಿಳಿಸಿದ್ದರು. ಕಾನೂನು ಬಾಹಿರ ಕೃತ್ಯಗಳು ಆ ಜಾಗದಲ್ಲಿ ಬಹಳ ಹಿಂದಿನಿಂದಲೂ ನಡೆಯುತ್ತಿರುವ ಮಾಹಿತಿ ಇದ್ದು, ಅದನ್ನು ನಿಲ್ಲಿಸಲು ಪೊಲೀಸ್ ಇಲಾಖೆ ಯಾವ ಕ್ರಮ ಕೈಗೊಂಡಿದೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಅತ್ಯಾಚಾರ ನಡೆದ ಸ್ಥಳ ಆಲವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುತ್ತದೆ. ಆಲವಳ್ಳಿ ಪೆÇಲೀಸ್ ಠಾಣೆಯಲ್ಲಿ 60 ಮಂದಿ ಸಿಬ್ಬಂದಿಗಳು, ಒಂದು ಗಸ್ತು ವಾಹನ ಇದ್ದ ಹೊರತಾಗಿಯೂ ಪೊಲೀಸರು ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ತಿರುಗದೆ ಇರುವುದು ಅವರ ಕರ್ತವ್ಯಲೋಪವಲ್ಲದೆ ಇನ್ನೇನು? ಕೃತ್ಯ ನಡೆದ ಜಾಗದ ಸುತ್ತಮುತ್ತ ಒಟ್ಟು 545 ಎಕರೆ ಖಾಲಿ ಪ್ರದೇಶವಿದೆ. ಈ ಪ್ರದೇಶ ಯಾರಿಗೆ ಸೇರಿದ್ದು ಎಂಬುದು ಅಧಿಕಾರಿಗಳಿಗೆ ಗೊತ್ತಿಲ್ಲ. ಕಮಿಷನರ್ ಅವರನ್ನು ಕೇಳಿದರೆ ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದೇವೆ, ಇನ್ನೂ ಉತ್ತರ ಬಂದಿಲ್ಲ ಎನ್ನುತ್ತಾರೆ. ಹೀಗಾದರೆ ಸಂತ್ರಸ್ತರಿಗೆ ನ್ಯಾಯ ಸಿಗೋದಾದರೂ ಹೇಗೆ? ಎಂದು ಅವರು ಹೇಳಿದರು.

ಕಳೆದ 30 ದಿನಗಳಲ್ಲಿ ಮೈಸೂರಿನಲ್ಲಿ 16 ಸುಲಿಗೆಗಳು, ಹತ್ತಾರು ಕೊಲೆಗಳು ನಡೆದಿದೆ, 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ, ಬ್ಯಾಂಕ್ ವೊಂದರ ದರೋಡೆ ಆಗಿದೆ, ಶೂಟೌಟ್ ನಡೆದು ಒಬ್ಬ ಸಾವಿಗೀಡಾಗಿದ್ದಾನೆ. ಇಷ್ಟೆಲ್ಲಾ ಅಪರಾಧಗಳು ನಡೆದರೂ ಪೊಲೀಸ್ ಇಲಾಖೆ ಇನ್ನೂ ಎಚ್ಚರಗೊಂಡಿಲ್ಲ. ಗೃಹ ಸಚಿವರು ಮಾಧ್ಯಮಗಳೆದುರು ಸಂತ್ರಸ್ತ ಯುವತಿ ಸಂಜೆ ಆ ಜಾಗಕ್ಕೆ ಹೋಗಿದ್ದೇ ತಪ್ಪು ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿದ್ದರು. ಯಾಕೆ ಹುಡುಗಿಯರು ಸಂಜೆಯಾದ ಮೇಲೆ ಮನೆಯಿಂದ ಹೊರ ಬರಬಾರದಾ? ಗೃಹ ಸಚಿವರ ಈ ಹೇಳಿಕೆ ಪ್ರಕರಣದಲ್ಲಿ ತಪ್ಪು ಸಂತ್ರಸ್ತೆಯದು ಎಂದು ಹೇಳಿದ ಹಾಗೆ ಅಲ್ಲವಾ? ಎಂದು ಅವರು ಕೇಳಿದರು.

ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತೀರ್ಥಹಳ್ಳಿಯಲ್ಲಿ ನಂದಿತಾ ಎಂಬ ಯುವತಿಯ ಮೇಲೆ ಅತ್ಯಾಚಾರ ನಡೆದಿದೆ ಎಂಬ ದೂರು ದಾಖಲಾಗಿತ್ತು. ಈಗಿನ ಗೃಹ ಸಚಿವ ಆರಗ ಜ್ಞಾನೇಂದ್ರ ಬೀದಿಗಿಳಿದು ಪ್ರತಿಭಟನೆ ಮಾಡಿ, ಸರಕಾರದ ವಿರುದ್ಧ ಸುಳ್ಳು ಆರೋಪ ಮಾಡಿ ಜನರನ್ನು ಪ್ರಚೋದಿಸಿದ್ದರು ಎಂದು ಸಿದ್ದರಾಮಯ್ಯ ಹೇಳಿದರು. 

ನಂದಿತಾ ಪ್ರಕರಣದ ತನಿಖೆಯನ್ನು ನಾನು ಸಿ.ಐ.ಡಿ ಗೆ ವಹಿಸಿದೆ. ಸಿಐಡಿ ತನಿಖಾ ವರದಿಯಲ್ಲಿ ಹುಡುಗಿಯ ಮೇಲೆ ಅತ್ಯಾಚಾರ ಇಲ್ಲವೇ ಕೊಲೆ ಯತ್ನ ನಡೆದಿಲ್ಲ ಎಂದಿತ್ತು. ಹಾಗಾದರೆ  ಸುಳ್ಳು ಆರೋಪ, ಪ್ರಚೋದನೆ ಮೂಲಕ ಹಲವು ದಿನಗಳ ಕಾಲ ರಾಜ್ಯದಲ್ಲಿ ಅಶಾಂತಿ ಉಂಟುಮಾಡಿದ್ದಕ್ಕೆ ಯಾರನ್ನು ಹೊಣೆಮಾಡಬೇಕು? ಈಗಿನ ಗೃಹ ಮಂತ್ರಿಗಳನ್ನೋ? ಎಂದು ಅವರು ಪ್ರಶ್ನಿಸಿದರು.

ಮೈಸೂರಿನಲ್ಲಿ ಎಂ.ಬಿ.ಎ ವಿದ್ಯಾರ್ಥಿನಿಯ ಅತ್ಯಾಚಾರ ನಡೆದ ದಿನವೇ ತುಮಕೂರು, ಯಾದಗಿರಿಯಲ್ಲಿ ಅತ್ಯಾಚಾರ ನಡೆಯಿತು. ಒಂದು ವಾರದೊಳಗೆ ಅಲ್ಲೇ ಪಕ್ಕದ ನಾಯ್ಡು ನಗರದಲ್ಲಿ ಇನ್ನೊಬ್ಬಳು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಯತ್ನ ನಡೆಯಿತು. ಮಹಿಳೆಯರ ಮೇಲಿನ ಇಂತಹಾ ಅತ್ಯಾಚಾರ, ದೌರ್ಜನ್ಯಗಳು ನಿಲ್ಲಬೇಕು ಎಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News