ಕಾಂಗ್ರೆಸ್ ನ 20 ಶಾಸಕರು ಬಿಜೆಪಿಗೆ ಸೇರಲು ಸಿದ್ಧ: ನಳಿನ್‍ಕುಮಾರ್ ಕಟೀಲ್

Update: 2021-09-22 16:31 GMT
ನಳಿನ್‍ಕುಮಾರ್ ಕಟೀಲ್

ಬೆಂಗಳೂರು, ಸೆ.22: ಕಾಂಗ್ರೆಸ್ ಪಕ್ಷದ 20 ಜನ ಶಾಸಕರು ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ. ಅವರನ್ನು ಬಲೆ ಹಾಕಿ ಸೆಳೆಯುವ ಕೆಲಸವನ್ನು  ಸಚಿವ ಮುನಿರತ್ನ ಅವರಿಗೆ ನೀಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಹೊಸಬಾಂಬ್ ಸಿಡಿಸಿದ್ದಾರೆ.

ಬುಧವಾರ ಇಲ್ಲಿನ ಚೌಡಯ್ಯ ಮೆಮೊರಿಯಲ್ ಹಾಲ್ ನಲ್ಲಿ ಏರ್ಪಡಿಸಿದ್ದ ಒಬಿಸಿ ಮೋರ್ಚಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಳಿನ್‍ಕುಮಾರ್ ಕಟೀಲ್, 'ಕಾಂಗ್ರೆಸ್ ಪಕ್ಷವನ್ನು ಹಿಂದುಳಿದ ವರ್ಗದವರು ದೂರ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹಿಂದುಳಿದ ವರ್ಗಗಳ ಅನೇಕ ನಾಯಕರು ಬಿಜೆಪಿ ಸೇರಲಿದ್ದಾರೆ ಎಂದು ವಿಶ್ವಾಸದಿಂದ ನುಡಿದರು. ಹಿಂದುಳಿದ ವರ್ಗದ ಕಂಚಿನ ಕಂಠಕ್ಕೆ ಹಕ್ಕು ಮತ್ತು ಧ್ವನಿಯನ್ನು ಜನಪರ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದಾರೆ' ಎಂದು ವಿವರಿಸಿದರು.

'ಸಿದ್ದರಾಮಯ್ಯ ಅವರ ಅಹಿಂದ ಹೋರಾಟವು ಅಧಿಕಾರಕ್ಕೆ ಸೀಮಿತವಾಯಿತು. ಆದರೆ, ನಮ್ಮ ಸರಕಾರವು ವಿದ್ಯಾರ್ಥಿಗಳಿಗೆ ಮೀಸಲಾತಿ, ಹೆಚ್ಚು ಸ್ಕಾಲರ್ ಶಿಪ್ ನೀಡಿದೆ. ಹಿಂದುಳಿದ ಜಾತಿ ಪಟ್ಟಿಗೆ ಜಾತಿ ಸೇರ್ಪಡೆಯ ಅವಕಾಶವನ್ನೂ ರಾಜ್ಯಗಳಿಗೆ ನೀಡಲಾಗಿದೆ' ಎಂದು ವಿವರಿಸಿದರು.

'ಹಿಂದುಳಿದ ವರ್ಗಗಳ ಸಮುದಾಯದ ಜವಾಬ್ದಾರಿಯನ್ನು ಈಶ್ವರಪ್ಪ ಅವರಿಗೆ ನೀಡಿದ್ದೇವೆ. ಅವರು ಶ್ರೀ ನರೇಂದ್ರ ಬಾಬು ಅವರ ಜೊತೆಗೂಡಿ ಒಬಿಸಿಯ ಎಲ್ಲ ಸಮುದಾಯದವರನ್ನು ಬಿಜೆಪಿಗೆ ತರಲಿದ್ದಾರೆ' ಎಂದು ತಿಳಿಸಿದರು.

'ಬಿಜೆಪಿ ಒ.ಬಿ.ಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಜ್ಯಸಭಾ ಸದಸ್ಯರಾದ ಡಾ.ಲಕ್ಷ್ಮಣ್ ಅವರು ಮಾತನಾಡಿ, ಒಬಿಸಿ ಸಮುದಾಯದ 7 ಜನರನ್ನು ಸಚಿವರನ್ನಾಗಿ ಮಾಡಿದ್ದಕ್ಕೆ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಮೋರ್ಚಾವು ಒಬಿಸಿ ಸಮುದಾಯದ ಕೇಂದ್ರ ಸಚಿವರನ್ನು ಈಗಾಗಲೇ ಗೌರವಿಸಿದೆ' ಎಂದು ತಿಳಿಸಿದರು. 

'ಒಬಿಸಿ ಸಮುದಾಯದ 27 ಜನರನ್ನು ಸಚಿವರನ್ನಾಗಿ ಮಾಡಿ  ನರೇಂದ್ರ ಮೋದಿ ಅವರು ಹೊಸ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. ಅಲ್ಪಸಂಖ್ಯಾತರ ಕೋಟಾದಡಿ ವಿವಿಧ ಮತದವರಿಗೂ ಅವಕಾಶ ನೀಡಿದ್ದಾರೆ ಎಂದರು. ಒಬಿಸಿ ಸಮುದಾಯಕ್ಕೆ ಶೇ 27ರಷ್ಟು ಮೀಸಲಾತಿಯನ್ನು ನೀಡಿದ ಸರಕಾರ ನಮ್ಮದು' ಎಂದು ವಿವರಿಸಿದರು.

ಆರ್ಥಿಕವಾಗಿ ಅತ್ಯಂತ ಹಿಂದುಳಿದವರಿಗೂ ಶೇ 10ರಷ್ಟು ಮೀಸಲಾತಿಯನ್ನು ಪ್ರಧಾನಿಯವರು ನೀಡಿದ್ದಾರೆ ಎಂದ ಅವರು, ಸಂಸತ್ತಿನಲ್ಲಿ ನೂತನ ಸಚಿವರನ್ನು ಪರಿಚಯಿಸಲು ಕಾಂಗ್ರೆಸ್ ಅವಕಾಶ ನೀಡಲಿಲ್ಲ. ಇದಕ್ಕಾಗಿ ಜನಾಶೀರ್ವಾದ ಯಾತ್ರೆಯನ್ನು ಪಕ್ಷ ಹಮ್ಮಿಕೊಂಡಿತು ಎಂದು ವಿವರಿಸಿದರು.

ಒಬಿಸಿ, ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರನ್ನು, ಮಹಿಳೆಯರನ್ನು ಕೇಂದ್ರ ಸಂಪುಟದಲ್ಲಿ ಸೇರಿಸಲು ಕಾಂಗ್ರೆಸ್ ಬಯಸುತ್ತಿಲ್ಲ. ಅದು ಕುಟುಂಬ ರಾಜಕೀಯವನ್ನಷ್ಟೇ ಬಯಸುವ ಪಕ್ಷ ಎಂದು ಅವರು ತಿಳಿಸಿದರು.

ಹಿಂದುಳಿದ ವರ್ಗದವರಿಗೆ ಮೀಸಲಾತಿ ಕುರಿತ ವಿಧೇಯಕವನ್ನು ಯಾಕೆ ನೆಹರೂ ಅವರು ತರಲಿಲ್ಲ, ಕಾಂಗ್ರೆಸ್ ಆ ಕುರಿತು ಯಾಕೆ ಪ್ರಯತ್ನಿಸಲಿಲ್ಲ ಎಂದು ಅವರು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು. ದೇವೇಗೌಡರಾದರೂ ಆ ಕುರಿತು ಪ್ರಯತ್ನ ಮಾಡಲಿಲ್ಲ ಎಂದ ಅವರು, ಮಂಡಲ ಆಯೋಗದ ಶಿಫಾರಸನ್ನೂ ಇಂದಿರಾ ಗಾಂಧಿ ಅನುಷ್ಠಾನಕ್ಕೆ ತರಲಿಲ್ಲ ಎಂದರು. ಒಬಿಸಿ ಸಮುದಾಯಕ್ಕಾಗಿ ನರೇಂದ್ರ ಮೋದಿ ಅವರ ಕಾರ್ಯಗಳನ್ನು ಅವರು ಶ್ಲಾಘಿಸಿದರು. 

ಮೀನುಗಾರಿಕೆಗೆ ಪ್ರತ್ಯೇಕ ಸಚಿವ ಸ್ಥಾನ, ಪ್ರತ್ಯೇಕ ಸಚಿವಾಲಯ, ಹೆಚ್ಚು ಅನುದಾನ ನೀಡಲಾಗಿದೆ. ಒಬಿಸಿ ವಿದ್ಯಾರ್ಥಿಗಳಿಗೆ ಕೇಂದ್ರೀಯ ವಿದ್ಯಾಲಯ, ನವೋದಯ ಇತರ ಶಿಕ್ಷಣ ಸಂಸ್ಥೆಗಳಲ್ಲಿ ಸೇರ್ಪಡೆ ಅವಕಾಶವನ್ನೂ ನೀಡಲಾಗಿದೆ ಎಂದು ತಿಳಿಸಿದರು. ಒಬಿಸಿ ಪಟ್ಟಿಗೆ ಜಾತಿ ಸೇರ್ಪಡೆ ಅಧಿಕಾರವನ್ನು ರಾಜ್ಯಗಳಿಗೆ ನೀಡಲಾಗಿದೆ. ಕಾಂಗ್ರೆಸ್ ಒಬಿಸಿ ಸಮುದಾಯಕ್ಕೆ ಮಾಡಿದ್ದ ಮೋಸ ಮತ್ತು ನರೇಂದ್ರ ಮೋದಿ ಅವರ ಸಾಧನೆಯನ್ನು ಜನರಿಗೆ ತಿಳಿಸಿ ಎಂದು ಮನವಿ ಮಾಡಿದರು.

ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಾತನಾಡಿ, ಹಿಂದುಳಿದ ವರ್ಗದ ಪ್ರಮುಖರಾದ ನಳಿನ್‍ಕುಮಾರ್ ಕಟೀಲ್ ಅವರು ನಮ್ಮ ರಾಜ್ಯಾಧ್ಯಕ್ಷರಾಗಿದ್ದಾರೆ.  ನರೇಂದ್ರ ಮೋದಿ ಅವರು ಹಿಂದುಳಿದ ವರ್ಗದ ನಾಯಕರಾದರೂ ಪ್ರಪಂಚದ ಜನಮನವನ್ನೇ ಗೆದ್ದಿದ್ದಾರೆ ಎಂದು ವಿವರಿಸಿದರು.

ಹಿಂದುಳಿದವರಿಗೆ ಮೋಸ ಮಾಡಿದ ಪಕ್ಷ ಕಾಂಗ್ರೆಸ್. ಅದನ್ನು ಒಬಿಸಿ ಸಮುದಾಯದ ಜನರು ಅರ್ಥ ಮಾಡಿಕೊಂಡಿದ್ದಾರೆ. ಒಬಿಸಿ ಮೋರ್ಚಾವು ಕೇಂದ್ರ- ರಾಜ್ಯ ಸರಕಾರದ ಯೋಜನೆಗಳನ್ನು ಜನರಿಗೆ ತಿಳಿಸಬೇಕು. ಮುಂದಿನ ವಿಧಾನಸಭೆಗೆ ಮೊದಲು ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಎರಡು ಹೋಳಾಗಲಿದೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆ ನೆರವೇರಿಸಿದರು. ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‍ಪಾಲ್ ಸುವರ್ಣ, ಒ.ಬಿ.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ನೆ.ಲ. ನರೇಂದ್ರಬಾಬು ಅವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News